ಚಿತ್ರದುರ್ಗ (ಡಿ.24) : ಕಳೆದ 89 ವರ್ಷಗಳ ಬಳಿಕ ತುಂಬಿರುವ ಹಿರಿಯೂರಿನ ವಿವಿಸಾಗರಕ್ಕೆ ಬಾಗಿನ ಸಮರ್ಪಣೆ ಮತ್ತು ಅಭಿನಂದನಾ ಸಮಾರಂಭವೂ ಡಿ. 27 ರ ಮಂಗಳವಾರ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯೂರು ನಾಗರೀಕ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಹೊರಕೇರಪ್ಪ ವಿವಿಸಾಗರಕ್ಕೆ ಭದ್ರಾ ನೀರು ಬರಬೇಕೆನ್ನವುದು ಹಲವಾರು ವರ್ಷಗಳ ಹೋರಾಟವಾಗಿದೆ ಇದರ ಬಗ್ಗೆ ಪತ್ರಕರ್ತರು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದರ ಫಲವಾಗಿ ಈಗ 135 ಅಡಿ ನೀರು ಹರಿಯುತ್ತಿದೆ. ಈಗ ನೀರಾವರಿಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಇದನ್ನು ಮತ್ತಷ್ಟು ವೇಗವಾಗಿ ಕಾಮಗಾರಿಯನ್ನು ಮಾಡಬೇಕಿದೆ. ಇದಕ್ಕೆ ಜನ ಪ್ರತಿನಿಧಿಗಳ, ಇಚ್ಚಾಶಕ್ತಿ ಅಗತ್ಯವಾಗಿದೆ ಎಂದರು.
ಈ ಯೋಜನೆಯನ್ನು ಕೇಂದ್ರ ಸರ್ಕಾರ ಸಾರ್ವಜನಿಕ ಅಧ್ಯತೆಯ ಮೇರೆಗೆ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಅಂಗೀಕಾರ ಮಾಡುವುದರ ಮೂಲಕ ಹಣವನ್ನು ಬಿಡುಗಡೆ ಮಾಡಬೇಕಿದೆ. ಇದಕ್ಕೆ ಬೇಕಾದ ಪ್ರಕ್ರಿಯೇಗಳು ಕೇಂದ್ರದಲ್ಲಿ ನಡೆಯುತ್ತಿದೆ.
ಈ ವಿವಿಸಾಗರವನ್ನು ನಿರ್ಮಾಣ ಮಾಡಿದ್ದು ಮಹರಾಣೀ ಕೆಂಪನಂಜಮ್ಮ ರವರು. ಇಲ್ಲಿಗೆ ನೀರು ಹರಿಯ ಬೇಕೆಂದು ಹೋರಾಟವನ್ನು ಪ್ರಾರಂಭ ಮಾಡಲಾಯಿತು. ಕೋದಂಡರಾಮಯ್ಯ ನವರು ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಮೇಲೆ ಇದಕ್ಕೆ ಬಲವನ್ನು ತುಂಬಿ ಲೋಕಸಭೆಯಲ್ಲಿ ಇದರ ಬಗ್ಗೆ ಮಾತನಾಡಿದರು.
ಸಮಿತಿಯ ಗೌರವಾಧ್ಯಕ್ಷರಾದ ಮಹೇಶ್ ಮಾತನಾಡಿ ಡಿ.27 ರಂದು ನಡೆಯುವ ಬಾಗಿನ ಸಮರ್ಪಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ರೈತ ಬೆಳೆಯುವ ದಿನ ನಿತ್ಯದ ವಸ್ತುಗಳನ್ನು ಬಾಗಿನದಲ್ಲಿ ಇರಿಸಿ ಅದನ್ನು ನೀರಿಗೆ ಬಿಡಲಾಗುವುದು. ಅಲ್ಲದೆ ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ 30 ಜನ ಮುಖಂಡರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಅಂದು ಬೆಳಿಗ್ಗೆ 11 ಗಂಟೆಗೆ ಭಾಗಿನವನ್ನು ಸಮರ್ಪಿಸಲಾಗವುದು.
ಈ ಕಾರ್ಯಕ್ರಮಕ್ಕೆ ಸರ್ವರು ಸಹಾ ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು.
ಗೋಷ್ಟಿಯಲ್ಲಿ ಚಳ್ಳಕೆರೆ ಬಸವರಾಜು, ಅರುಣ್ ಕುಮಾರ್, ಕೂನಿಕೆರೆ ರಾಮಣ್ಣ, ಧನಂಜಯ ಕುಮಾರ್ ಮಹೇಶ್ ಬಾಬು ಭಾಗವಹಿಸಿದ್ದರು.