ಬೆಂಗಳೂರು: ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ಶಿಕ್ಷಕರ ನೇಮಕಾತಿ ಬಗ್ಗೆ ಚರ್ಚೆ ನಡೆದಿದೆ. ಸುರಪುರ ಶಾಸಕ ರಾಜುಗೌಡ ಈ ಪ್ರಶ್ನೆಯನ್ನು ಎತ್ತಿದ್ದಾರೆ. ರಾಜ್ಯದಲ್ಲಿ 45,565 ಹುದ್ದೆಗಳು ಖಾಲಿ ಇದೆ ಎಂದು ರಾಜುಗೌಡ ಮಾಹಿತಿ ನೀಡಿದ್ದಾರೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯಲ್ಲಿ 18,477 ಹುದ್ದೆ ಖಾಲಿ ಇದೆ. ಈ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನೇ ನೇಮಕ ಮಾಡಿಕೊಳ್ಳಿ ಎಂದು ಶಾಸಕ ರಾಜುಗೌಡ ಪಟ್ಟು ಹಿಡಿದಿದ್ದಾರೆ.
ಇದೇ ವೇಳೆ ಶಾಸಕ ರಾಜುಗೌಡ ಪ್ರಶ್ನೆಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಉತ್ತರ ನೀಡಿದ್ದಾರೆ. ಶಿಕ್ಷಕರ ಕೊರತೆ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿರುವುದು ಸತ್ಯ. ಕಲ್ಯಾಣ ಕರ್ನಾಟಕದಲ್ಲಿ 5 ಸಾವಿರ ನೇಮಕಕ್ಕೆ ನಿರ್ಧಾರ ಮಾಡಲಾಗಿದೆ. 3-4 ಸಾವಿರ ನೇಮಕವಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಸಾಧ್ಯವಾಗದೆ ಇದ್ರೆ ನವೆಂಬರ್ 6ಕ್ಕೆ ಟಿಇಟಿ ಮಾಡಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಜನವರಿ ಅಥವಾ ಫೆಬ್ರವರಿ ವೇಳೆಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಅಲ್ಲಿಯವರೆಗೂ ಅತಿಥಿ ಶಿಕ್ಷಕರನ್ನೇ ಮುಂದುವರೆಸುತ್ತೇವೆ ಎಂದಿದ್ದಾರೆ.