ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಶಿಕ್ಷಣ ಇಲಾಖೆ ಮುಂದಾಗಿದ್ದು, ರಾಜ್ಯದ 800 ಸರ್ಕಾರಿ ಶಾಲೆಗಳನ್ನ ಪಬ್ಲಿಕ್ ಶಾಲೆಗಳಾಗಿ ಮಾಡಲು ಹೊರಟಿದೆ. ಇದರಿಂದ ಒಂದೇ ಸೂರಿನಡಿ ಅಂದ್ರೆ ಎಲ್ ಕೆ ಜಿ ಯಿಂದ ಹಿಡಿದು ಪಿಯುಸಿತನಕ ಸರ್ಕಾರಿ ಶಾಲೆ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿದೆ. ರಾಜ್ಯದಲ್ಲಿ ಸದ್ಯ 309 ಕರ್ನಾಟಕ ಪಬ್ಲಿಕ್ ಶಾಲೆಗಳು ಜಾರ್ಯನಿರ್ವಹಣೆ ಮಾಡುತ್ತಿವೆ. ಈ ಶಾಲೆಗಳಲ್ಲಿ ಒಟ್ಟು 2,72,464 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ವಿಶ್ವಾಸ ಕೂಡ ಹೆಚ್ಚುವಂತೆ ಆಗಿದೆ.
ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣದಿಂದ (Pre-Primary) ಆರಂಭವಾಗಿ ದ್ವಿತೀಯ ಪಿಯುಸಿವರೆಗೂ ಒಂದೇ ಆವರಣದಲ್ಲಿ ಶಿಕ್ಷಣವನ್ನು ಖಾತ್ರಿಗೊಳಿಸುವುದು ಈ ಶಾಲೆಗಳ ಮುಖ್ಯ ಗುರಿಯಾಗಿದೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳು ಪದೇ ಪದೇ ಶಾಲೆ ಬದಲಾಯಿಸುವ ತೊಂದರೆ ತಪ್ಪಲಿದ್ದು, ಸುಸಜ್ಜಿತ ಮೂಲಸೌಕರ್ಯದೊಂದಿಗೆ ಶಿಕ್ಷಣ ಲಭ್ಯವಾಗಲಿದೆ. ಸರ್ಕಾರವು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಬದ್ಧವಾಗಿದ್ದು, ಹಂತಹಂತವಾಗಿ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಪರಿವರ್ತಿಸುತ್ತಿದೆ. ಮುಂದಿನ 3 ವರ್ಷಗಳಲ್ಲಿ ಹೆಚ್ಚುವರಿ 800 ಶಾಲೆಗಳನ್ನು ಈ ಯೋಜನೆಯಡಿ ಸೇರ್ಪಡಿಸುವ ಮೂಲಕ ಗ್ರಾಮೀಣ ಭಾಗದ ಶೈಕ್ಷಣಿಕ ಚಿತ್ರಣವನ್ನೇ ಬದಲಿಸಲು ಸರ್ಕಾರ ಮುಂದಾಗಿದೆ.
ಈ ರೀತಿಯ ವ್ಯವಸ್ಥೆಯಿಂದಾಗಿ ಅದೆಷ್ಟೋ ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಕ್ಕಂತೆ ಆಗುತ್ತದೆ. ಇರುವ ಬೆರಳೆಣಿಕೆಯಷ್ಟು ಸರ್ಕಾರಿ ಶಾಲೆಗಳಲ್ಲಿ ಈಗಲೂ ಮಕ್ಕಳು ಓದುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳನ್ನ ಮುಚ್ಚುವುದನ್ನು ಕಡಿಮೆ ಮಾಡಿ, ಈ ರೀತಿ ಅಭಿವೃದ್ಧಿಯತ್ತ ಗಮನ ಹರಿಸಿದರೆ ಸರ್ಕಾರಿ ಶಾಲೆಗಳಲ್ಲೂ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ.







