Dear ಉರಿಯಮ್ಮ/ಉರಿಯಪ್ಪನವರೇ : ಬಾನು ಮುಷ್ತಾಕ್ ಹೀಗೆ ಹೇಳ್ತಿರೋದ್ಯಾಕೆ..?

2 Min Read

ಬಹಳಷ್ಟು ವಿರೋಧದ ನಡುವೆಯೂ ಈ ಬಾರಿಯ ದಸರಾವನ್ನು ಬಾನು ಮುಷ್ತಾಕ ಅವರೇ ಉದ್ಘಾಟನೆ ಮಾಡಿದ್ದಾರೆ. ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಉರಿಯಮ್ಮ / ಉರಿಯಪ್ಪ ಎಂಬ ಪದ ಬಳಕೆ ಮಾಡಿದ್ದಾರೆ.

Dear ಉರಿಯಮ್ಮ/ಉರಿಯಪ್ಪನವರೇ, ನಿಮ್ಮ ಮಾತುಗಳ ಬಿರುಗಾಳಿಯನ್ನು ನಾನು ಓದುತ್ತಿದ್ದೇನೆ.ನೀವು ಬರೆದ ಪದಗಳಲ್ಲಿ ನೋವು ಇದೆ,ಅಸಹನೆ ಇದೆ, ಕೆಲವೊಮ್ಮೆ ಕೋಪವೂ ಇದೆ.ಆದರೆ ನನಗೆ ಅವುಗಳನ್ನು ಎದುರಿಸಲು ಯಾವುದೇ ರಕ್ಷಣೆಯ ಅವಶ್ಯಕತೆಯಿಲ್ಲ.ಏಕೆಂದರೆ ನಾನು ಬರವಣಿಗೆಗೆ ಕೈ ಹಾಕಿದ ದಿನದಿಂದಲೂ ತಿಳಿದಿದ್ದೇನೆ—ಪದಗಳು ಪ್ರೀತಿಯನ್ನು ಕೂಡ ಹುಟ್ಟಿಸುತ್ತವೆ,ದ್ವೇಷವನ್ನೂ ಹುಟ್ಟಿಸುತ್ತವೆ.ಎರಡೂ ಸಹ ನನಗೆ ಬರಹಗಾರ್ತಿಯಾಗಿ ಒದಗಿ ಬಂದಿರುವ ಬದುಕಿನ ಭಾಗವೇ.

ಬುಕ್ಕರ್ ಪ್ರಶಸ್ತಿ ನನಗೆ ವ್ಯಕ್ತಿಗತ ಜಯವಲ್ಲ,ಅದು ಕನ್ನಡ ಭಾಷೆಯ ಮಣ್ಣಿನ ಧ್ವನಿಗೆ ಬಂದ ಗೌರವ.ನನ್ನ ಜೀವನದ ಅನುಭವಗಳ ಸಾರ. ನಿಮ್ಮ ಅಸಹನೆ ನನಗೆ ಅಸಹ್ಯವಲ್ಲ.ಅದನ್ನು ನಾನು ಮತ್ತೊಂದು ಧ್ವನಿಯಾಗಿ, ಮತ್ತೊಂದು ಪ್ರಶ್ನೆಯಾಗಿ ಸ್ವೀಕರಿಸುತ್ತೇನೆ.ಏಕೆಂದರೆ ಸಾಹಿತ್ಯದ ನಿಜವಾದ ಶಕ್ತಿ ಏನೆಂದರೆ—ಅದು ಒಪ್ಪಿಗೆಯನ್ನೂ ಹುಟ್ಟಿಸುತ್ತದೆ, ವಿರೋಧವನ್ನೂ ಹುಟ್ಟಿಸುತ್ತದೆ.ಆದರೆ ಕೊನೆಯಲ್ಲಿ ಅದು ಚಿಂತನೆಗೆ ದಾರಿ ತೆರೆದೀತು.

ನೀವು ನನ್ನನ್ನು ಕುರಿತು ಕಟುವಾಗಿ ಬರೆದಾಗ,ನಾನು ಕೇವಲ ಹೀಗೆ ಯೋಚಿಸುತ್ತೇನೆ: “ನನ್ನ ಪದಗಳು ನಿಮಗೆ ತಲುಪಿವೆ. ನೀವು ಅವುಗಳನ್ನು ನಿರ್ಲಕ್ಷಿಸಿಲ್ಲ.ಅವುಗಳಲ್ಲಿ ನಿಮಗೆ ಏನೋ ತಟ್ಟಿದೆ.” ಇದು ನನಗೆ ಸಾಕು. ನಿಮ್ಮ ಮಾತುಗಳಲ್ಲಿ ಕೋಪವಿದೆ,ಅಸಹನೆಯಿದೆ, ನೋವಿದೆ. ಅದನ್ನು ನಾನು ತಪ್ಪಿಸಿಕೊಳ್ಳುವುದಿಲ್ಲ. ನಾನು ಓದುತ್ತೇನೆ,ಮನಸ್ಸಿಗೆ ಒಗ್ಗಿಸಿಕೊಳ್ಳುತ್ತೇನೆ. ಏಕೆಂದರೆ ಬರವಣಿಗೆಯ ದಾರಿ ಎಂದರೆ,ಕೇವಲ ಪ್ರಶಂಸೆಯಿಂದ ತುಂಬಿರುವ ಹಾದಿಯಲ್ಲ. ಅಲ್ಲಿ ಗುಲಾಬಿಯೂ ಅರಳುತ್ತದೆ, ಮುಳ್ಳೂ ಬೆಳೆಯುತ್ತದೆ.

ಈ ಸಮಯದಲ್ಲಿ,ನನ್ನ ಮನಸ್ಸು ತುಂಬಿದೆ ಅವರಿಗೆ ಕೃತಜ್ಞತೆಯಿಂದ,ಯಾರು ನನ್ನ ಬರವಣಿಗೆಯನ್ನು ಪ್ರೀತಿಯಿಂದ ಓದಿದ್ದಾರೆ, ಯಾರು ಅನುಭವಿಸಿದ್ದಾರೆ, ಮತ್ತು ಯಾರು ಈ ಸಾಧನೆಗಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ.ನಿಮ್ಮ ಪ್ರೇಮ ಮತ್ತು ಬೆಂಬಲವೇ ನನಗೆ ಸ್ಫೂರ್ತಿ.ಹೇಟ್ ಸ್ಪೀಚ್ ಮಾಡುವವರ ಕಡೆಗೆ ನನ್ನ ಭಾವನೆ ಕರುಣೆಯದು. ಏಕೆಂದರೆ,ಯಾರೋ ಒಬ್ಬರ ಸಾಧನೆಯಿಂದ ಉದ್ಭವಿಸುವ ನೋವನ್ನು ತಾಳುವುದು ಮತ್ತು ಬಾಳುವುದು ಸುಲಭವಲ್ಲ. ಅವರ ಹೃದಯಗಳಲ್ಲಿ ಸಮಾಧಾನ ಬೆಳೆಯಲಿ ಎಂದು ಕೋರುತ್ತೇನೆ.

ಅಭಿನಂದನೆಗಳಿಗೆ ಧನ್ಯವಾದ,ಟೀಕೆಗಳಿಗೆ ಧನ್ಯವಾದ.ಬುಕರ್ ಪಡೆದ ಅಪರಾಧಕ್ಕಾಗಿ ಕನ್ನಡದೊಡನೆ ಪ್ರಪಂಚ ಪರ್ಯಟನೆ ಕೈಗೊಂಡು ಜೊತೆ ಜೊತೆಯಲ್ಲಿ ನಡೆಯುತ್ತಿರುವ ಅಪರಾಧಕ್ಕಾಗಿ ಧನ್ಯವಾದ. ಅಪ್ರಾಮಾಣಿಕ ಆರೋಪ ಪಟ್ಟಿಯನ್ನು ಹೊರಿಸುವ ವಿಫಲ ಪ್ರಯತ್ನದ ಮೂಲಕ ಇತಿಹಾಸದಲ್ಲಿ ದಾಖಲಾದ ಮತ್ತು ದಾಖಲಾಗುತ್ತಿರುವ ಎಲ್ಲರಿಗೂ ಧನ್ಯವಾದ.ಎಲ್ಲವೂ ನನ್ನ ಪಯಣದ ಭಾಗ ಎಂದಿದ್ದಾರೆ.

Share This Article