ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಮೇ.25) : ಮಳೆಯಿಂದ ಹಾನಿಗೊಳಗಾದ ಚಿತ್ರದುರ್ಗ ನಗರದ ವಿವಿಧ ಬಡಾವಣೆಗಳಿಗೆ ಗುರುವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ, ಪರಿಶೀಲನೆ ನೀಡಿದರು.
ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದ ರಸ್ತೆಯ ಬುದ್ಧನಗರ, ಕೆಹೆಚ್‍ಬಿ ಕಾಲೋನಿ ಸಮೀಪದ ಬಾಬು ಜಗಜೀವನ್ ರಾಂ ನಗರ, ಸಾಧಿಕ ನಗರ, ಎಪಿಎಂಸಿ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಸರ್ಕಾರದ ನಿಯಮಾನುಸಾರ ತ್ವರಿತವಾಗಿ ಪರಿಹಾರ ವಿತರಣೆಗೆ ಸೂಚಿಸಿದರು.
ಮಳೆಯಿಂದಾಗಿ ನಗರದ ಚರಂಡಿಗಳು ಭರ್ತಿಯಾಗಿದ್ದು, ಚರಂಡಿಗಳು ಕಿರಿದಾಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಹಾಗಾಗಿ ಚರಂಡಿಗಳನ್ನು ದೊಡ್ಡದಾಗಿ ಅಗಲೀಕರಣ ಮಾಡಿ ಚರಂಡಿ ನೀರು ಸರಾಗವಾಗಿ ಹರಿದುಹೋಗಲು ಶಾಶ್ವತ ಪರಿಹಾರದ ಕ್ರಮಕೈಗೊಳ್ಳಬೇಕು. ನೀರು ನುಗ್ಗಿರುವ ಮನೆಗಳನ್ನು ನಗರಸಭೆ ವತಿಯಿಂದ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಚಿತ್ರದುರ್ಗ ನಗರದ ವಿವಿಧೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುಳಿದಿದ್ದು, ಕೂಡಲೇ ಹೊಸದಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು. ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಕೂಡಲೇ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಅರಣ್ಯ ಇಲಾಖೆ ಹಾಗೂ ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪೂರ್ವ ಮುಂಗಾರು ಪ್ರಾರಂಭವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಹಾಗೂ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿ, ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು. ವಿದ್ಯುತ್ ಕಂಬಗಳಿಗೆ ಅಡಚಣೆಯಾಗುವ ರಂಬೆ, ಕೊಂಬೆಗಳನ್ನು ತೆರವುಗೊಳಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.
ಬುದ್ಧನಗರ, ಸಾಧಿಕ್ ನಗರ, ಬಾಬು ಜಗಜೀವನ್‍ರಾಂ ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ದಿನಸಿ ವಸ್ತುಗಳು ಜಲಾವೃತಗೊಂಡಿದ್ದವು. ಈ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕಿರಿದಾದ ಚರಂಡಿಗಳು, ಚರಂಡಿಯಲ್ಲಿ ಕಸಕಡ್ಡಿ ತುಂಬಿದ್ದರಿಂದ ನೀರು ಹೊರಬಂದು ಮನೆಗಳಿಗೆ ನುಗ್ಗಿದೆ. ಇದಕ್ಕೆ ನಗರಸಭೆ ಅಧಿಕಾರಿಗಳು ಹೊಣೆಗಾರರು ಎಂದು ಅಲ್ಲಿನ ನಿವಾಸಿಗಳು ದೂರು ನೀಡಿದರು.
ಇನ್ನೂ ಮುಂದೆ ರೀತಿ ಆಗದಂತೆ ಎಚ್ಚರವಹಿಸಿ ಕಾರ್ಯನಿರ್ವಹಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನೀರು ನುಗ್ಗಿದ ಮನೆಗಳಿಗೆ ಹಾಗೂ ಮನೆ ಹಾನಿ ಸಂತ್ರಸ್ಥರಿಗೆ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗವೇಣಿ, ನಗರಸಭೆ ಪೌರಾಯುಕ್ತ ಶ್ರೀನಿವಾಸ್, ಅರಣ್ಯ ಇಲಾಖೆ, ಬೆಸ್ಕಾಂ, ನಗರಸಭೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.