ಜಿಲ್ಲಾಧಿಕಾರಿ ತುರ್ತು ಸಭೆ : ನಿರಂತರ ಮಳೆ ಸೂಕ್ತ ಕ್ರಮಕೈಗೊಳ್ಳಲು ಸೂಚನೆ

2 Min Read

ಚಿತ್ರದುರ್ಗ, (ನವೆಂಬರ್.19) :  ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ಹಾನಿ ಹಾಗೂ ಮನೆಗಳು ಕುಸಿತವಾಗುತ್ತಿರುವುದರಿಂದ ಅಧಿಕಾರಿಗಳು ಮುನ್ನಚ್ಚರಿಕೆವಹಿಸಿ ಪರಿಹಾರ ಕಾರ್ಯಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನಲೆಯಲ್ಲಿ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಳ್ಳ, ಕೆರೆ ಕಟ್ಟೆ ತುಂಬಿ ಹರಿಯುವುರಿಂದ ಜನರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 166 ಕೆರೆಗಳು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಬರಲಿದ್ದು, ಇದರಲ್ಲಿ ಈಗಾಗಲೇ 22 ಕೆರೆಗಳು ತುಂಬಿದ್ದು, ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹೆಚ್ಚಿನ ಕೆರೆಗಳು ತುಂಬುವ ಸಾಧ್ಯತೆ ಇದ್ದು, ಇದರಿಂದ ಕೆರೆ ಏರಿ ಕುಸಿತ, ಕೆರೆ ಕೋಡಿ ಬೀಳುವುದರಿಂದ ರೈತರ ಜಮೀನುಗಳಿಗೆ ನೀರು ಹರಿದು ಬೆಳೆ ಹಾನಿಯಾಗುವುದು, ರೈತ ಜಮೀನುಗಳಿಗೆ ಸಂಪರ್ಕ ಸಂಪೂರ್ಣ ಕಡಿದುಹೋಗುವುದು, ರಸ್ತೆ ಕೊಚ್ಚಿ ಹೋಗುವುದರಿಂದ ಸುತ್ತಮುತ್ತಲಿರುವ ಜನರಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿ ಈ ಬಗ್ಗೆ ಅಧಿಕಾರಿಗಳು ತೀವ್ರ ನಿಗಾವಹಿಸಿ ಕಾರ್ಯನಿರ್ವಹಿಸಬೇಕು ತಾಕೀತು ಮಾಡಿದರು.

ಮಳೆಯಿಂದಾಗುವ ಹಾನಿಗೆ ಸಂಬಂಧಪಟ್ಟಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕರಾರುವಕ್ಕಾಗಿ ಅಂಕಿಅಂಶದ ಮಾಹಿತಿ ಸಂಗ್ರಹಿಸಬೇಕು. ಮಳೆಯಿಂದ ಬೆಳೆಹಾನಿ ತಡೆಗಟ್ಟುವ ನಿಟ್ಟಿನಲ್ಲಿ ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು ರೈತರಿಗೆ ನಿರಂತರವಾಗಿ ಮಾಹಿತಿ ಕೊಡುವ ಕೆಲಸವಾಗಬೇಕು ಎಂದರು.

ಮಳೆಯ ಹಿನ್ನಲೆಯಲ್ಲಿ ಜಿಲ್ಲಾ ಹಾಗೂ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿ ಇರಬೇಕು. ಯಾವುದೇ ಸಿಬ್ಬಂದಿಗೂ ರಜೆ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್ ಮಾತನಾಡಿ, ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಈ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೀಟಜನ್ಯ ರೋಗಗಳು ಹರಡುವ ಸಾಧ್ಯತೆ ಇದೆ. ಮನೆಯ ಸುತ್ತಮುತ್ತಲಿನ ವಾತಾವರಣ, ಚರಂಡಿ, ಟ್ಯಾಂಕ್‍ಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇದರ ಜೊತೆಗೆ ಘನತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದರು.

ಉತ್ತಮ ಆರೋಗ್ಯ ಕಾಪಾಡುವ ಸಲುವಾಗಿ ಎಲ್ಲರೂ ಶುದ್ಧ ಕುಡಿಯುವ ನೀರು ಕುಡಿಯುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು. ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್‍ಲೈನ್, ಓವರ್ ಹೆಡ್ ಟ್ಯಾಂಕ್‍ಗಳಲ್ಲಿ ನೀರು ಸೋರಿಕೆಯಾಗದಂತೆ ಕ್ರಮವಹಿಸಬೇಕು ಹಾಗೂ ಟ್ಯಾಂಕ್‍ಗಳನ್ನು ಸ್ವಚ್ಚ ಮಾಡುವ ಜೊತೆಗೆ ನೀರನ್ನು ಪರೀಕ್ಷೆಗೆ ಒಳಪಡಿಸಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *