ಚಿತ್ರದುರ್ಗ (ಏ.08) : ಪ್ರಸಕ್ತ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನೀತಿ ಸಂಹಿತೆ ಪಾಲನೆಯ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಧಾನಸಭೆ ಕ್ಷೇತ್ರ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಶನಿವಾರ ನಡೆಸಿದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆ ಸಂಬಂಧ ಈಗಾಗಲೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿ ಆಕಾಂಕ್ಷಿಗಳು ಚುನಾವಣಾ ಪ್ರಚಾರ ಪ್ರಾರಂಭಿಸಿದ್ದು, ಸಭೆ, ಸಮಾರಂಭ, ರ್ಯಾಲಿ, ಹೆಲಿಕಾಪ್ಟರ್ ಬಳಕೆ ಮುಂತಾದ ಕಾರ್ಯಗಳಿಗೆ ಅನುಮತಿ ಪಡೆಯುವ ಕಾರ್ಯ ಚಾಲನೆಗೊಂಡಿದೆ.
ಇಂತಹ ಅನುಮತಿ ಪಡೆಯುವ ಸಲುವಾಗಿ ಸುವಿಧಾ ತಂತ್ರಾಂಶವಿದ್ದು, ಇದರಡಿಯೇ ಅನುಮತಿಗೆ ಅರ್ಜಿ ಸಲ್ಲಿಸುವಂತೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಗೆ ಅರಿವು ಮೂಡಿಸಬೇಕು. ಸಮಾರಂಭ, ರ್ಯಾಲಿ, ಹೆಲಿಕಾಪ್ಟರ್ ಬಳಕೆ ಮುಂತಾದವುಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಕ್ಷೇತ್ರ ಚುನಾವಣಾಧಿಕಾರಿಗಳು ನಿಷ್ಪಕ್ಷಪಾತವಾಗಿ, ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅದೇ ರೀತಿ ಸ್ಟಾರ್ ಪ್ರಚಾರಕರ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಕೂಡ ನಿಯಮಾನುಸಾರ ವೆಚ್ಚವನ್ನು ಸಂಬಂಧಪಟ್ಟ ಪಕ್ಷ ಅಥವಾ ಅಭ್ಯರ್ಥಿಗೆ ನಮೂದಿಸುವ ಕಾರ್ಯವನ್ನು ಕೈಗೊಳ್ಳಬೇಕು. ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಪಾಲನೆ ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ಹಾಗೂ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣಾ ಕಾರ್ಯ ಸಮರ್ಪಕವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅವರು ಮಾತನಾಡಿ, ಸಭೆ, ಸಮಾರಂಭ ಅಥವಾ ರ್ಯಾಲಿಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದ ರೀತಿ, ಮುಂಜಾಗ್ರತೆ ವಹಿಸಿ, ನಿಷ್ಪಕ್ಷಪಾತವಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು, ಬಳಿಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ತಿಳಿಸಿದರು.
ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗಿರುವ ವಿವಿಧ ಕ್ಷೇತ್ರಗಳ ಚಿತ್ರದುರ್ಗ ಜಿಲ್ಲೆಯ ಸಿಬ್ಬಂದಿಗಳು ಮತದಾನದಿಂದ ವಂಚಿತರಾಗದಂತೆ ಈ ಬಾರಿ ಚುನಾವಣಾ ಆಯೋಗ, ಇವರಿಗೆ ಪೋಸ್ಟಲ್ ಬ್ಯಾಲಟ್ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು, ಯಾರೊಬ್ಬ ಅರ್ಹ ಮತದಾರನೂ ಕೂಡ ಮತದಾನದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಚುನಾವಣಾ ಆಯೋಗವು ಈ ಬಾರಿ ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗುವ ವಿದ್ಯುತ್ ಇಲಾಖೆ, ಬಿಎಸ್‍ಎನ್‍ಎಲ್, ರೈಲ್ವೆ, ದೂರದರ್ಶನ, ಆಕಾಶವಾಣಿ, ಆರೋಗ್ಯ ಇಲಾಖೆ, ವಿಮಾನಯಾನ, ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆಗಳ ನೌಕರರು, ಅಗ್ನಿಶಾಮಕ ಸೇವೆ, ಮಾನ್ಯತೆ ಹೊಂದಿರುವ ಪತ್ರಕರ್ತರು, ಟ್ರಾಫಿಕ್ ಪೊಲೀಸ್ ಮತ್ತು ಆಂಬುಲೆನ್ಸ್ ಸೇವೆಯಲ್ಲಿರುವರು ಕರ್ತವ್ಯದ ಕಾರಣದಿಂದಾಗಿ ಮತದಾನದ ದಿನದಂದು ಮತ ಚಲಾಯಿಸಲು ಸಾಧ್ಯವಾಗದ ಸಂದರ್ಭ ಬರಬಹುದಾದ ನೌಕರರು, ಪೋಸ್ಟಲ್ ಬ್ಯಾಲಟ್ ಸೇವೆ ಪಡೆಯಲು, ಅವರು ಕಡ್ಡಾಯವಾಗಿ ಚಿತ್ರದುರ್ಗ ಜಿಲ್ಲೆಯ ಯಾವುದಾದರೂ ಮತಗಟ್ಟೆಯಲ್ಲಿ ತಮ್ಮ ಮತ ಹೊಂದಿರಬೇಕು. ಅಂತಹವರು ಸಂಬಂಧಪಟ್ಟ ಇಲಾಖೆಯಿಂದ 12ಡಿ ನಮೂನೆಯನ್ನು ಪಡೆದು, ಸ್ವೀಕೃತಿ ನೀಡಬೇಕು. ಬಳಿಕ ಭರ್ತಿ ಮಾಡಿದ ನಮೂನೆಯನ್ನು ಸಂಬಂಧಪಟ್ಟ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. 12 ಡಿ ನಮೂನೆಯನ್ನು ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಒಮ್ಮೆ ಸಲ್ಲಿಸಿದ ಬಳಿಕ, ಅಂತಹವರು, ಪೋಸ್ಟಲ್ ಬ್ಯಾಲಟ್ ಮೂಲಕವೇ ಮತದಾನ ಮಾಡಬೇಕು, ಮತದಾನ ದಿನದಂದು ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅವಕಾಶ ಇರುವುದಿಲ್ಲ. ಈ ವಿಧಾನವು ಕೇವಲ ಆಯಾ ಸಿಬ್ಬಂದಿಗೆ ಐಚ್ಛಿಕವಾಗಿದ್ದು, ಕಡ್ಡಾಯವಲ್ಲ ಎಂದರು.
ಏಪ್ರಿಲ್ 11 ರವರೆಗೂ ಅವಕಾಶ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ 2023ರ ಏಪ್ರಿಲ್ 11 ರವರೆಗೂ ಅವಕಾಶ ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರೂ, ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದವರು ಮತದಾರರ ಪಟ್ಟಿಗೆ ಸೇರ್ಪಡೆಗೆ ಸಮೀಪದ ತಹಶೀಲ್ದಾರ್ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗೆ ಹಾಗೂ ವೋಟರ್ ಹೆಲ್ಪ್‍ಲೈನ್ ಆಪ್ ಹಾಗೂ ಎನ್‍ವಿಎಸ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮತಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ, ಇಲ್ಲವೋ ಎಂಬುದನ್ನು ಬಿಎಲ್‍ಓ ಬಳಿ ಅಥವಾ ವೋಟರ್ ಹೆಲ್ಪ್‍ಲೈನ್ ಆಪ್‍ನಲ್ಲಿಯೂ ಪರಿಶೀಲಿಸಿ ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್, ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಚಿತ್ರದುರ್ಗ ಕ್ಷೇತ್ರ ಚುನಾವಣಾಧಿಕಾರಿ ಚಂದ್ರಯ್ಯ, ಚಳ್ಳಕೆರೆ ಚುನಾವಣಾಧಿಕಾರಿ ಆನಂದ್, ಮೊಳಕಾಲ್ಮೂರು ಚುನಾವಣಾಧಿಕಾರಿ ರಮೇಶ್, ಹೊಸದುರ್ಗ ಕ್ಷೇತ್ರ ಚುನಾವಣಾಧಿಕಾರಿ ಮಹೇಂದ್ರಕುಮಾರ್, ಹೊಳಲ್ಕೆರೆ ಚುನಾವಣಾಧಿಕಾರಿ ವಿವೇಕಾನಂದ, ಹಿರಿಯೂರು ಚುನಾವಣಾಧಿಕಾರಿ ಕೆ. ತಿಮ್ಮಪ್ಪ, ಚುನಾವಣಾ ವೆಚ್ಚ ನೋಡಲ್ ಅಧಿಕಾರಿ ಮಧು, ಎಂಸಿಎಂಸಿ ನೋಡಲ್ ಅಧಿಕಾರಿ ಗಾಯತ್ರಿ ಸೇರಿದಂತೆ ವಿವಿಧ ಅಧಿಕಾರಿಗಳು, ಆಯಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಭಾಗವಹಿಸಿದ್ದರು.