ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ (ಫೆ.09): ಮತದಾರರು ಚುನಾವಣೆ ಸಂದರ್ಭದಲ್ಲಿ ತಮ್ಮ ಮಹತ್ವದ ಮತವನ್ನು ತಪ್ಪದೆ ಚಲಾಯಿಸಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.
ತಾಲ್ಲೂಕಿನ ಎಂ.ಕೆ.ಹಟ್ಟಿ ಗ್ರಾಮ ಪಂಚಾಯಿತಿಯ ಎಂ.ಕೆ. ಹಟ್ಟಿ ಗ್ರಾಮ, ಮೆದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾನಗರ ಹಾಗೂ ಮದಕರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಳ್ಳೆಕೆರೆನಹಳ್ಳಿ ಗ್ರಾಮಗಳಲ್ಲಿ ಗುರುವಾರ ಮಿಂಚಿನ ಸಂಚಾರ ನಡೆಸಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತ ಚಲಾಯಿಸುವುದು ಹಕ್ಕು ಮಾತ್ರವಲ್ಲದೇ, ದೇಶಕಟ್ಟುವ ನಿಟ್ಟಿನಲ್ಲಿ ಕರ್ತವ್ಯ ಕೂಡ ಆಗಿದೆ. ಈ ನಿಟ್ಟಿನಲ್ಲಿ ಎಲ್ಲ ಅರ್ಹ ಮತದಾರರು ಶೇ.100ರಷ್ಟು ಮತದಾನಕ್ಕೆ ಮುಂದಾಗಬೇಕು ಎಂದು ಪ್ರೇರೇಪಿಸಿದರು.
ಮತದಾರರ ಪಟ್ಟಿಯಲ್ಲಿರುವಂತೆ ತಮ್ಮ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಲ್ಲಿ ಸರಾಗವಾಗಿ ಮತದಾನ ಮಾಡಲು ಅನುಕೂಲ ಮಾಡಿಕೊಡಲಾಗುವುದು. ಯಾವುದೇ ಗೊಂದಲವಿಲ್ಲದೆ ಮತದಾನ ಮಾಡುವಂತೆ ಅರಿವು ಮೂಡಿಸಿದರು.
ಮತದಾರರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‍ಗಳ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಇಂತಹ ಕಾರ್ಯಕ್ರಮಗಳಲ್ಲಿ ಮತದಾರರು ತಪ್ಪದೆ ಪಾಲ್ಗೊಂಡು, ಇತರರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, 18 ವರ್ಷ ತುಂಬಿದ ಯುವಕ, ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ, ಕಡ್ಡಾಯವಾಗಿ ಮತದಾನದ ಹಕ್ಕು ಚಲಾಯಿಸುವಂತೆ ಜಾಗೃತಿ ಮೂಡಿಸಿದರು.
ವಿದ್ಯುನ್ಮಾನ ಮತಯಂತ್ರಗಳಾದ ಇವಿಎಂ ಹಾಗೂ ವಿವಿ ಪ್ಯಾಟ್‍ಗಳ ಕುರಿತು ಅರಿವು ಮೂಡಿಸಲಾಗುತ್ತಿದ್ದು, ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‍ಗಳಿಂದ ಇದೀಗ ಪಾರದರ್ಶಕತೆ ಕಂಡುಬರುತ್ತಿದೆ. ಹೀಗಾಗಿ ಎಲ್ಲರೂ ಸುಗಮವಾಗಿ ಮತದಾನ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಆಯಾ ಗ್ರಾಮ ಪಂಚಾಯಿತಿಗಳ ಪಿಡಿಓ ಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇದ್ದರು.