ಲಖನೌ: ಉತ್ತರ ಪ್ರದೇಶದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯಲ್ಲಿ ಗುಂಡಿಗಳು ಬಿದ್ದಿವೆ. ಬುಧವಾರ ಸುರಿದ ಮಳೆಗೆ ರಸ್ತೆ ಭಾಗಶಃ ಹಾಳಾಗಿ ಹೋಗಿದೆ. ಐದು ದಿನಗಳ ಹಿಂದೆ 296 ಕಿ.ಮೀ ಉದ್ದದ ಈ ಚತುಷ್ಪಥ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು ಗಮನಾರ್ಹ.
ಭಾರೀ ಮಳೆಯಿಂದಾಗಿ ಸೇಲಂಪುರ ಚಿರಿಯಾ ಬಳಿಯ ಈ ರಸ್ತೆಯು ಬ್ಲಾಕ್ ಆಗಿದೆ. ಇದರಿಂದ ಬುಧವಾರ ರಾತ್ರಿ ಇಲ್ಲಿ ರಸ್ತೆ ಅಪಘಾತಗಳು ಸಂಭವಿಸಿವೆ. ಎರಡು ಕಾರುಗಳು ಹಾಗೂ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದೆ. ಔರಿಯಾದ ಅಜಿತ್ಮಲ್ ಮಾಲ್ ಪ್ರದೇಶದಲ್ಲಿ ಇದೇ ರೀತಿ ರಸ್ತೆ ಹಾಳಾಗಿದೆ. ಆದರೆ ಈ ಭಾಗಗಳಲ್ಲಿ ಈಗಾಗಲೇ ದುರಸ್ತಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯಲ್ಲಿ ಕೇವಲ ಐದು ದಿನಗಳಲ್ಲಿ ಗುಂಡಿ ಬಿದ್ದಿವೆ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಮಳೆಯಿಂದಾಗಿ ರಸ್ತೆ ಅಪೂರ್ಣವಾಗಿದೆ ಎಂಬುದು ಜನರಿಗೆ ತಿಳಿದಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಇದು ಡಬಲ್ ಇಂಜಿನ್ ಸರ್ಕಾರದ ಸಾಧನೆ ಎಂದು ಆಮ್ ಆದ್ಮಿ ಪಕ್ಷದ ವ್ಯಂಗ್ಯವಾಡಿದೆ.
8000 ಕೋಟಿ ವೆಚ್ಚದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯನ್ನು ಜುಲೈ 16 ರಂದು ಮೋದಿ ಉದ್ಘಾಟಿಸಿದರು. ಈ ಚತುಷ್ಪಥ ರಸ್ತೆಯನ್ನು ಆರು ಪಥಗಳಿಗೂ ವಿಸ್ತರಿಸಬಹುದು. ಈ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ 7 ಜಿಲ್ಲೆಗಳು ಮತ್ತು ಮಧ್ಯಪ್ರದೇಶದ 6 ಜಿಲ್ಲೆಗಳಲ್ಲಿ ವ್ಯಾಪಿಸಿದೆ.