ದಾವಣಗೆರೆ: ಈಗಷ್ಟೇ ಇಂಜಿನಿಯರಿಂಗ್ ಮುಗಿಸಿದ್ದ ಯುವತಿ ಕಲರ್ ಫುಲ್ ಜಗತ್ತನ್ನ ಅನುಭವಿಸುವ ಬದಲಿಗೆ ಆಧ್ಯಾತ್ಮದ ಹಾದಿ ಹಿಡಿದಿರುವ ಘಟನೆ ನಡೆದಿದೆ. ದಾವಣಗೆರೆಯ ಪ್ರತಿಭಾವಂತ ವಿದ್ಯಾರ್ಥಿನಿ ಅಂಚಲ್ ಕುಮಾರಿ ಸಂನ್ಯಾಸತ್ವ ಸ್ವೀಕಾರ ಮಾಡಲಿದ್ದಾರೆ. ದಾವಣಗೆರೆಯ ಪ್ರತಿಷ್ಠಿತ ಬಿಐಇಟಿ ಕಾಲೇಜಿನಲ್ಲಿ ಈಕೆ ಇಂಜಿನಿಯರಿಂಗ್ ಮಾಡಿದ್ದರು. ಆದರೆ ಈಗ ಸಂನ್ಯಾಸತ್ವವನ್ನ ಆಯ್ಕೆ ಮಾಡಿಕೊಂಡಿದ್ದಾರೆ.
ಅಂಚಲ್ ಕುಮಾರಿಗೆ ಈಗಿನ್ನು 26 ವರ್ಷ. ದಾವಣಗೆರೆಯ ಚೌಕಿಪೇಟೆಯ ನಿವಾಸಿಗಳಾದ ಮುಖೇಶ್ ಮತ್ತು ಸುನಿತಾ ಬಾಯಿ ದಂಪತಿಯ ಮೂರನೇ ಪುತ್ರಿಯಾಗಿದ್ದಾರೆ. ಅಂಚಲ್ ಅವರ ಅಕ್ಕಂದಿರಿಗೆ ಈಗಾಗಲೇ ಮದುವೆಯಾಗಿದೆ. ಅಂಚಲ್ ಕೂಡ ಇಂಜಿನಿಯರಿಂಗ್ ಮುಗಿಸಿದ್ದರು. ಕಾಲೇಜು ದಿನಗಳಲ್ಲಿಯೇ ಈ ಅಂಚಲ್ ಅವರಿಗೆ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವಿತ್ತಂತೆ. ಜೊತೆಗೆ ಸಂನ್ಯಾಸಿಗಳ ಜೀವನ ಶೈಲಿಯೂ ಬಹಳ ಪ್ರಭಾವ ಬೀರಿತ್ತಂತೆ.
ಸಂಸಾರದ ಲೌಕಿಕ ಸುಖಕ್ಕಿಂತ ಸಂನ್ಯಾಸತ್ವದಲ್ಲಿ ಸಿಗುವ ಸುಖ ಮತ್ತು ನೆಮ್ಮದಿ ಶ್ರೇಷ್ಠವಾದದ್ದು ಎಂಬುದನ್ನ ಅಂಚಲ್ ನಂಬಿದ್ದರು. ಹೀಗಾಗಿಯೇ ತನ್ನ ಹೆತ್ತವರು, ಒಡಹುಟ್ಟಿದವರು ಹಾಗೂ ಕೋಟಿ ಕೋಟಿ ಮೌಲ್ಯದ ಆಸ್ತಿ ಪಾಸ್ತಿಯನ್ನು ತ್ಯಜಿಸಿರುವ ಅಂಚಲ್ ಕುಮಾರಿ, ನಾಳೆ ಅಂದ್ರೆ ಶುಕ್ರವಾರ ಗುಜರಾತ್ ನ ಸೂರತ್ ನಲ್ಲಿ ಅಧಿಕೃತವಾಗಿ ಸಂನ್ಯಾಸತ್ವದ ದೀಕ್ಷೆ ಪಡೆಯಲಿದ್ದಾರೆ. ಇಂಜಿನಿಯರಿಂಗ್ ನಲ್ಲಿ ಟಾಪರ್ ಸ್ಟೂಡೆಂಟ್ ಆಗಿದ್ದಂತ ಯುವತಿಯೊಬ್ಬಳು ಹೀಗೆ ಜಗತ್ತಿನ ಸುಖವನ್ನೆಲ್ಲಾ ತ್ಯಜಿಸಿ ಹೀಗೆ ಸಂನ್ಯಾಸತ್ವ ಸ್ವೀಕರಿಸಿರೋದು ದಾವಣಗೆರೆಯ ಮಂದಿಗೆ ಶಾಕಿಂಗ್ ನ್ಯೂಸ್ ಥರ ಆಗಿದೆ. ಆದರೆ ಆ ವಿದ್ಯಾರ್ಥಿನಿಗೆ ಆ ಜೀವನವೇ ಅತ್ಯದ್ಭುತ ಎನಿಸಿದೆ.

