ದಾವಣಗೆರೆ | ಫೆಬ್ರವರಿ 23 ರಂದು ಯಶಸ್ವಿ ಬೃಹತ್ ಉದ್ಯೋಗ ಮೇಳಕ್ಕೆ ಕ್ರಮವಹಿಸಿ: ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ

1 Min Read

ದಾವಣಗೆರೆ, ಫೆಬ್ರವರಿ.16 : ದಾವಣಗೆರೆ ನಗರದ ಎಂಸಿಸಿ ಬ್ಲಾಕ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆಬ್ರವರಿ 23 ರಂದು ಉದ್ಯೋಗ ಮೇಳ ನಡೆಯಲಿದೆ, ಮೇಳದಲ್ಲಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಕಾರ್ಯಕ್ರಮ ಯಶಸ್ವಿಗೆ ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ತಿಳಿಸಿದರು.

 

ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

ಬೃಹತ್ ಉದ್ಯೋಗ ಮೇಳಕ್ಕಾಗಿ ಈಗಾಗಲೇ ಪೋರ್ಟಲ್ ಮೂಲಕ ನೋಂದಣಿ ಆರಂಭವಾಗಿದ್ದು, 45ಕ್ಕೂ ಹೆಚ್ಚು ಕಂಪನಿಗಳು  ನೋಂದಾಯಿಸಿಕೊಂಡಿವೆ. ಇನ್ನು ಸುಮಾರು 20 ಕಂಪನಿಗಳು ಬರುವ ಸಾಧ್ಯತೆ ಇದೇ, ಇದರಲ್ಲಿ ಐಟಿ, ಮಾಸ್ಟರ್ ಡಿಗ್ರಿ, ಐಟಿಐ ಮತ್ತು ಎಸ್‌ಎಸ್‌ಎಲ್‌ಸಿ, ಪಿಯುಸಿ ಅಭ್ಯರ್ಥಿಗಳಿಗೆ ಐಟಿ ವಲಯ ಬ್ಯಾಂಕ್ ಕ್ಷೇತ್ರ, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಫಾರ್ಮಸಿಟಿಕಲ್ ಸೇರಿದಂತೆ ಇನ್ನು ಅನೇಕ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ನೀಡುವ ವಿವಿಧ ಕಂಪನಿಗಳು ಸೇರಿವೆ. ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವಂತೆ  ಕಾಲೇಜುಗಳಿಗೆ ಪತ್ರ ವ್ಯವಹಾರ ಮಾಡಿದ್ದು ಪ್ಲೇಸ್‌ಮೆಂಟ್ ಆಫೀಸರ್‌ಗಳ ಭೇಟಿ ಮಾಡಲಾಗಿದೆ ಎಂದು ತಿಳಿಸಿದರು.

 

ಸಾಮಾಜಿಕ ಜಾಲತಾಣದಲ್ಲಿ, ಪೋಸ್ಟರ್‌ಗಳು, ಜಿಂಗಲ್ಸ್ ಮತ್ತು ಸ್ವಚ್ಛ ಭಾರತ್ ವಾಹನಗಳ ಮೂಲಕ ವ್ಯಾಪಕ ಪ್ರಚಾರ ಮಾಡಲು ಕೈಗೊಳ್ಳಬೇಕು,  ಸುಮಾರು 4,000 ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಸಾಧ್ಯತೆ ಇದೆ, ಆದುದರಿಂದ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು.

 

ವಿದ್ಯಾರ್ಥಿಗಳಿಗೆ ಲಘು ಉಪಹಾರ, ನೀರು, ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ವ್ಯವಸ್ಥೆ, ವಿಶೇಷ ಬಸ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಸುಮಾರು 1,200 ಅಭ್ಯರ್ಥಿಗಳು ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಗೆ ಸಚಿವರು, ಗಣ್ಯರನ್ನು ಆಹ್ವಾನಿಸಬೇಕು ಎಂದು ತಿಳಿಸಿದರು.

 

ಇದೇ ಸಂದರ್ಭದಲ್ಲಿ ಬೃಹತ್ ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಸಿಇಒ ಗಿತ್ತೆ ಮಾಧವ ವಿಠಲ್ ರಾವ್, ಯೋಜನಾ ನಿರ್ದೇಶಕ  ಮಹಾಂತೇಶ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Enable Notifications OK No thanks