ದಾವಣಗೆರೆ .ಜು.28: ತುಂಗಭದ್ರಾ ನದಿಯಲ್ಲಿ 75 ಸಾವಿರ ಕ್ಯೂಸೆಕ್ಸ್ಗಿಂತಲೂ ಅಧಿಕ ನೀರು ಹರಿಯುತ್ತಿದ್ದು ಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿಗಳು ಬಾಕಿ ಇರುವುದರಿಂದ ಯಾವುದೇ ಕ್ಷಣದಲ್ಲಿ ನದಿಯಲ್ಲಿನ ನೀರಿನ ಪ್ರಮಾಣ ಏರಿಕೆಯಾಗಲಿದ್ದು ನದಿ ಪಾತ್ರದಲ್ಲಿನ ಜನರು ಎಚ್ಚರಿಕೆಯಿಂದಿರಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ತುಂಗಾ ಜಲಾಶಯದಿಂದ 74105 ಕ್ಯೂಸೆಕ್ಸ್ ನೀರು ತುಂಗಭದ್ರಾ ನದಿಯಲ್ಲಿ ಹರಿಯುತ್ತಿದೆ. ಭದ್ರಾ ಜಲಾಶಯ ಭರ್ತಿಯಾಗಲು 5 ಅಡಿ ಬಾಕಿ ಇದ್ದು 35557 ಕ್ಯೂಸೆಕ್ಸ್ ಒಳಹರಿವು ಇದೆ. ಮತ್ತು ಮಲೆನಾಡಿನಲ್ಲಿ ಉತ್ತಮ ಮಳೆ ಬರುತ್ತಿರುವುದರಿಂದ ನೀರಿನ ಒಳಹರಿವು ಹೆಚ್ಚಲಿರುವುದರಿಂದ ಭದ್ರಾ ಜಲಾಶಯ ಭರ್ತಿಯಾಗಿ ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡಬಹುದಾಗಿದ್ದು ನದಿಪಾತ್ರದಲ್ಲಿನ ಜನರು ತಮ್ಮ ಆಸ್ತಿ, ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು.
ತುಂಗಾದಿಂದ ನೀರು ಬರುತ್ತಿದ್ದು ಭದ್ರಾ ತುಂಬಿದ ನಂತರ ನದಿಯಲ್ಲಿನ ನೀರನ ಪ್ರಮಾಣ ಗಣನೀಯವಾಗಿ ಹೆಚ್ಚಲಿದ್ದು ಇದರಿಂದ ನದಿಯಲ್ಲಿನ ನೀರಿನ ಮಟ್ಟ ಅಪಾಯ ಮಟ್ಟದಲ್ಲಿರುತ್ತದೆ. ಇದರಿಂದ ಹೊನ್ನಾಳಿ, ನ್ಯಾಮತಿ, ಹರಿಹರ ತಾಲ್ಲೂಕುಗಳಲ್ಲಿನ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಹೊನ್ನಾಳಿ ಪಟ್ಟಣದ ನದಿ ತೀರದ ಬಾಲರಾಜ್‌ಘಾಟ್ ಪ್ರದೇಶದ 11 ಕುಟುಂಬದ 64 ಜನರನ್ನು ಅಂಬೇಡ್ಕರ್ ಭವನದಲ್ಲಿನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಮತ್ತು ನದಿ ಪಾತ್ರದಲ್ಲಿನ ಎಲ್ಲಾ ಗ್ರಾಮಗಳಲ್ಲಿ ಜನ, ಜಾನುವಾರುಗಳನ್ನು ನದಿಗೆ ಇಳಿಯದಂತೆ ಎಚ್ಚರ ವಹಿಸಲು ಜಾಗೃತಿ ಮೂಡಿಸಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಗ್ರಾಮ ಮಟ್ಟದ ಟಾಸ್ಕ್ಪೋರ್ಸ್ ಸಮಿತಿ ರಚಿಸಲಾಗಿದೆ. ಮತ್ತು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ತುರ್ತು ನಿಗಾ ಘಟಕಗಳನ್ನು ಸನ್ನದ್ದವಾಗಿಡಲಾಗಿದೆ. ಮತ್ತು ಅಧಿಕಾರಿಗಳು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.
ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಸಹಾಯವಾಣಿ ಸ್ಥಾಪನೆ; ಜಿಲ್ಲಾಧಿಕಾರಿಗಳ ಕಚೇರಿ 08192-234034, 1077, ಎಸ್‌ಡಿಆರ್‌ಎಫ್ ಘಟಕ, ದೇವರಬೆಳೆಕೆರೆ 7411308591, ದಾವಣಗೆರೆ ಅಗ್ನಿಶಾಮಕ ಇಲಾಖೆ 08192-258101, 112, ದಾವಣಗೆರೆ ಮಹಾನಗರ ಪಾಲಿಕೆ 08192-234444, 8277234444, ದಾವಣಗೆರೆ ತಾ; ಕಚೇರಿ 9036396101, ಹರಿಹರ 08192-272959, ಜಗಳೂರು 08196-227242, ಹೊನ್ನಾಳಿ 08188-252108, ನ್ಯಾಮತಿ 8073951245, ಚನ್ನಗಿರಿ 7892481962 ದೂರವಾಣಿ, ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ.