ದಾವಣಗೆರೆ | ಶಾಂತಿ ವಹಿಸಿ ಸೌಹಾರ್ದತೆ ಕಾಪಾಡಿ, ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ: ಜಿ. ಬಿ. ವಿನಯ್ ಕುಮಾರ್ ಒತ್ತಾಯ

1 Min Read

 

 

ಸುದ್ದಿಒನ್, ದಾವಣಗೆರೆ, ಸೆಪ್ಟೆಂಬರ್. 20 : ದಾವಣಗೆರೆ ನಗರದ ಜನರು ಶಾಂತಿಪ್ರಿಯರು. ಸಾಮರಸ್ಯದಿಂದ ಜೀವನ ಸಾಗಿಸಬೇಕು. ಯಾವುದೇ ಕಾರಣಕ್ಕೂ ಗಲಭೆ ಮಾಡಬಾರದು. ಪೊಲೀಸರು ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ವಾಭಿಮಾನಿ ಬಳಗದ ಪ್ರಮುಖರಾದ ಜಿ. ಬಿ. ವಿನಯ್ ಕುಮಾರ್ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಗರದಲ್ಲಿ ಇದುವರೆಗೆ ಯಾವುದೇ ಗಲಾಟೆಯಾಗಿರಲಿಲ್ಲ. ಎರಡೂ ಕೋಮಿನ ಜನರು  ಶಾಂತಿಯುತವಾಗಿರಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು. ಗಲಾಟೆ ಮಾಡುವುದರಿಂದ ಯಾರಿಗೂ ಅನುಕೂಲವಾಗದು. ಬಡವರು, ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗದವರಿಗೂ ತೊಂದರೆ ಆಗುತ್ತಿದೆ. ಪೊಲೀಸರು ತಪ್ಪು ಯಾರೇ ಮಾಡಿದ್ದರೂ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಭಿವೃದ್ಧಿ ವಿಚಾರದಲ್ಲಿ ಎಲ್ಲರ ಸಹಕಾರ ಅಗತ್ಯ. ಕೋಮು ಪ್ರಚೋದನೆ ಯಾರೇ ಮಾಡಿದರೂ ತಪ್ಪು. ಬೇತೂರು ರಸ್ತೆಯಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಅಶಾಂತಿ ವಾತಾವರಣ ನಿರ್ಮಾಣ ಆಗಿತ್ತು. ಪೊಲೀಸರು ಬಂಧಿಸುವ ವೇಳೆ ಅಮಾಯಕರನ್ನು ಬಂಧಿಸಬಾರದು. ಕಿಡಿಗೇಡಿಗಳನ್ನು ಗುರುತಿಸಿ ಜೈಲಿಗಟ್ಟಲಿ. ಎರಡೂ ಕೋಮಿನ ಸಮಾಜದ ಮುಖಂಡರು ಯುವಕರಿಗೆ ತಿಳಿಹೇಳಬೇಕು. ಗಲಾಟೆಗೆ ಮುಂದೆ ಆಸ್ಪದ ನೀಡಬಾರದು ಎಂದು ಹೇಳಿದ್ದಾರೆ.

ಪೊಲೀಸರು ಬಂಧಿಸುವ ವೇಳೆ ಅಮಾಯಕರನ್ನು ಬಂಧಿಸುವ ಕೆಲಸ ಆಗುತ್ತಿದೆ ಎಂಬ ಮಾತೂ ಕೇಳಿ ಬರುತ್ತಿದೆ. ಸಿಸಿಟಿವಿ, ಕಲ್ಲು ಎಸೆದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡರೆ ಮತ್ತೆ ಮರುಕಳಿಸುವುದಿಲ್ಲ. ಯಾರೂ ಕೋಮು ಪ್ರಚೋದಕ ಹೇಳಿಕೆ ನೀಡಬಾರದು. ಯಾವುದೇ ರಾಜಕೀಯ ಪಕ್ಷಗಳು ಓಲೈಕೆ ರಾಜಕಾರಣ ಮಾಡಬಾರದು. ಒಂದು ಕೋಮಿನ ಪರ ನಿಲ್ಲಬಾರದು. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಸಮಾಜದಲ್ಲಿ ಸಾಮರಸ್ಯ ಮೂಡಬೇಕು. ಶಾಂತಿ ನೆಲೆಸಬೇಕು. ಎಲ್ಲಾ ಧರ್ಮದವರೂ ಸಹೋದರರಂತೆ ಬಾಳಬೇಕು. ಯಾರೋ ಕೆಲ ಕಿಡಿಗೇಡಿಗಳು ಎಸಗುವ ಕೃತ್ಯಕ್ಕೆ ಸಮಾಜದ ಸ್ವಾಸ್ಥ್ಯ ಹಾಳಾಗಬಾರದು. ಯುವಕರು ಜಾಗೃತರಾಗಬೇಕು. ಯಾರೋ ನೀಡಿದ ಕುಮ್ಮಕ್ಕಿಗೆ ಬಲಿಯಾಗಬಾರದು. ಆದ್ದರಿಂದ ಎಲ್ಲಾ ಕೋಮಿನವರು ಶಾಂತಿ, ಸೌಹಾರ್ದ, ತಾಳ್ಮೆಯಿಂದ ವರ್ತಿಸಬೇಕು ಎಂದು ಜಿ. ಬಿ. ವಿನಯ್ ಕುಮಾರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *