ದಾವಣಗೆರೆ : ರಾಜ್ಯಾದ್ಯಂತ ಮಳೆಯ ಆರ್ಭಟ ನಿಲ್ಲುತ್ತಿಲ್ಲ. ಇದರಿಂದ ಕೆಲವೊಂದು ಬೆಳೆಗಳು ಕೈಗೆ ಸಿಗುತ್ತಿಲ್ಲ. ಅದರಲ್ಲೂ ಅಡಿಕೆಗಳಿಗೆ ಸಮಸ್ಯೆಯಾಗುತ್ತಿದೆ. ಜೋರಾದ ಮಳೆಯಿಂದಾಗಿ ಸಿಂಗಾರ ತಳಿಗೆ ಭಾರೀ ಹೊಡೆತ ಬೀಳುತ್ತಿದೆ. ಕೈಗೆ ಸಿಗಬೇಕಾದ ಅಡಿಕೆಗಳು ನೆಲ ಕಚ್ಚುತ್ತಿವೆ. ಅದರಲ್ಲೂ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ತುಮಕೂರು ಭಾಗದ ರೈತರು ಅಡಿಕೆ ಬೆಳೆಯನ್ನೇ ಪ್ರಧಾನವಾಗಿಸಿಕೊಂಡಿದ್ದಾರೆ. ಈ ಮೂಲಕ ಸುಮಾರು 5.63 ಲಕ್ಷ ಎಕ್ಟೇರ್ ನಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತದೆ.
ಕಳೆದ ಎರಡು ವರ್ಷದಿಂದ ಎಲೆಚುಕ್ಕೆ ರೋಗ ಹಾಗೂ ಕೊಳೆರೋಗದ ಬಾಧೆಯಿಂದ ಅಡಿಕೆ ಬೆಳೆ ನಲುಗುತ್ತಿದೆ. ಇದರಿಂದಾಗಿ ಸುಮಾರು 53,977 ಹೆಕ್ಟೇರ್ ಅಡಿಕೆ ನಾಶವಾಗಿತ್ತು. ಆದರೆ ಈ ವರ್ಷ ಕೊಂಚ ಚೇತರಿಸಿಕೊಂಡಿತ್ತು. ಆದರೆ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಎಲೆಚುಕ್ಕೆ ರೋಗದ ಬಾಧೆ ಕಾಡುತ್ತಿದೆ.
ಎಷ್ಟೋ ಕಡೆ ದೀಪಾವಳಿಗೆ ಕೊಯ್ಲು ಮಾಡಲಾಗುತ್ತದೆ. ಆದರೆ ಕೊಯ್ಲಿಗೂ ಮೊದಲೇ ಬೆಳೆದಿರುವ ಅಡಿಕೆ ಉದುರಲಾರಂಭಿಸಿದೆ. ಇನ್ನು ಸಿಂಗಾರಕ್ಕೆ ಅಕಾಲಿಕ ಮಳೆ ಬಾರೀ ಹೊಡೆತ ಕೊಟ್ಟಿದೆ. ಇದರಿಂದ ಇಳುವರಿಯೂ ಕಡಿಮೆಯಾಗಲಿದೆ. ಇದು ಸಹಜವಾಗಿಯೇ ರೈತರಿಗೆ ಆತಂಕ ಉಂಟು ಮಾಡಿದೆ. ಎಷ್ಟೋ ಕಡೆ ಅಡಿಕೆ ತೋಟಗಳಲ್ಲಿ ಬೆಳೆದಿರುವ ಕಾಫಿ, ಕಾಳು ಮೆಣಸು, ಏಲಕ್ಕಿಯೂ ಉದುರುವುದಕ್ಕೆ ಆರಂಭಿಸಿದೆ. ಮಳೆಯಿಂದಾಗಿ ಒಂದು ಕಡೆ ತರಕಾರಿ ಸೊಪ್ಪು ಕೈಗೆ ಸಿಗದೆ ನಷ್ಟ ಅನುಭವಿಸುತ್ತಿದ್ದರೆ, ಇತ್ತ ಮಳೆಯಿಂದಾಗಿಯೂ ಹಲವು ಬೆಳೆಗಳಿಗೆ ತೊಂದರೆಯಾಗಿದೆ. ಅದರಲ್ಲೂ ಕೊಯ್ಲಿನ ಸಮಯದಲ್ಲಿ ಒಂದೇ ಸಮನೆ ಹೀಗೆ ಮಳೆ ಸುರಿಯುತ್ತಿದ್ದರೆ ರೈತರಿಗೂ ಕಷ್ಟವಾಗುತ್ತದೆ.