ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಜ.21): ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿರವರು ಲಿಂಗೈಕ್ಯರಾದ ಜ.21 ನೇ ದಿನವನ್ನು ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ದಾಸೋಹ ದಿನವನ್ನಾಗಿ ಆಚರಿಸಲಾಯಿತು.
ನಗರದ ಗಾರೆಹಟ್ಟಿಯಲ್ಲಿರುವ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆ ಕಚೇರಿಯಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿರವರ ಫೋಟೋಗೆ ಪುಷ್ಪನಮನ ಸಲ್ಲಿಸಿ ಶುಕ್ರವಾರ ಪೂಜೆ ನೆರವೇರಿಸಲಾಯಿತು.
ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಎಂ.ಮಂಜುನಾಥ್ ಮಾತನಾಡಿ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೆ ನಾಡಿನಾದ್ಯಂತ ಹೆಸರುವಾಸಿಯಾಗಿ ಲಕ್ಷಾಂತರ ಬಡ ಮಕ್ಕಳಿಗೆ ಶಿಕ್ಷಣ ಹಾಗೂ ಅನ್ನದಾಸೋಹ ನೀಡಿ ಲಕ್ಷಾಂತರ ಭಕ್ತರ ಮನದಲ್ಲಿ ಇಂದಿಗೂ ಮರೆಯಾಗದೆ ಉಳಿದಿರುವ ಡಾ.ಶಿವಕುಮಾರ ಮಹಾಸ್ವಾಮಿಗಳ ಲಿಂಗೈಕ್ಯ ದಿನವನ್ನು ಅನ್ನ ದಾಸೋಹ ದಿನವನ್ನಾಗಿ ಆಚರಿಸಿ ಪ್ರತಿಯೊಬ್ಬರು ಸ್ವಾಮೀಜಿಗಳು ಬಿಟ್ಟು ಹೋಗಿರುವ ಮಾರ್ಗದರ್ಶನ, ಆದರ್ಶದಂತೆ ನಡೆಯಬೇಕಿದೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾ ಗೌರವಾಧ್ಕಕ್ಷ ಕೆ.ಸಿ.ಗಂಗಾಧರಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್‌ಸ್ವಾಮಿ, ತಾಲ್ಲೂಕು ಅಧ್ಯಕ್ಷ ಪ್ರಶಾಂತ್‌ರೆಡ್ಡಿ, ನಗರಾಧ್ಯಕ್ಷ ಶಿವರಾಜ್ ಜಾಲಿಕಟ್ಟೆ, ತಿಪ್ಪೇಸ್ವಾಮಿ ಎಸ್, ಕರಿಬಸವಯ್ಯ, ವೀರೇಶ್, ವಿಜಯಕುಮಾರ್, ಮನು ತಮಟಕಲ್ಲು, ಅನಿಲ್ ಚಿಕ್ಕಂದವಾಡಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಅನ್ನದಾಸೋಹ ದಿನದ ಅಂಗವಾಗಿ ಸುತ್ತಮುತ್ತಲಿನವರಿಗೆ ಪ್ರಸಾದ ವಿನಿಯೋಗಿಸಲಾಯಿತು.