ದರ್ಶನ್ ಜಾಮೀನು ರದ್ದು : ಮತ್ತೆ ಜೈಲಿಗೆ..!

1 Min Read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ದರ್ಶನ್ ಜಾಮೀನು ರದ್ದಾಗಿದೆ. ನ್ಯಾ.ಜೆ.ಬಿ.ಪರ್ದಿವಾಲಾ, ಆರ್ ಮಹದೇವನ್ ಅವರಿದ್ದ ಪೀಠದಿಂದ ಈ ಆದೇಶ ಬಂದಿದೆ.

ಈ ಸಂಬಂಧ ರಾಜ್ಯ ಸರ್ಕಾರದ ಪರ ವಕೀಲರು ಮಾತನಾಡಿದ್ದು, ಹಿರಿಯ ಹಾಗೂ ಅನುಭವಿ ವಕೀಲರಾದ ಸಿದ್ದಾರ್ಥ್ ಲೂಥ್ರಾ ಅವರ ನೇತೃತ್ವದಲ್ಲಿ ಈ ಪ್ರಕರಣ ನಡೆದಿದೆ. ತನಿಖೆಯ ಸಂದರ್ಭದಲ್ಲಿ ಕಲೆ ಹಾಕಿದ ದಾಖಲೆಗಳನ್ನು ಸುಪ್ರೀಂ ಕೋರ್ಟ್ ಮುಂದೆ ಇಟ್ಟಿದ್ದೆವು. ಆ ಸಾಕ್ಷಿಗಳನ್ನು ಸ್ವೀಕರಿಸಿದ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ದರ್ಶನ್ ಸೇರಿದಂತೆ ಎಲ್ಲರ ಜಾಮೀನು ರದ್ದು ಮಾಡಿದೆ. ತೀರ್ಪು ನೀಡುವ ಸಂದರ್ಭದಲ್ಲಿ ತಮ್ಮ ವಿವೇಚನಾಧಿಕಾರವನ್ನು ಕಾನೂನು ರೀತಿಯಾಗಿ ಉಪಯೋಗಿಸಿಲ್ಲ ಅಂತ ನಿಂದನೆ ಮಾಡಿದ್ದಾರೆ. ಸಮಾಜದಲ್ಲಿ ಯಾವುದೇ ವ್ಯಕ್ತಿ, ಎಷ್ಟೇ ಶ್ರೀಮಂತನಾಗಿರಲಿ, ಬಲಿಷ್ಠನಾಗಿರಲಿ ಕಾನೂನು ಸಮಾನ ಎಂಬುದು ಈ ಮೂಲಕ ಪ್ರೂವ್ ಆಗಿದೆ ಎಂದಿದ್ದಾರೆ.

ಅಷ್ಟೇ ಅಲ್ಲ ಮುಂದೆ ಜೈಲಿನಲ್ಲಿ ವೈಭವದ ಜೀವನ ನಡೆಸಿದರೆ, ಆ ಜೈಲಿನ ಅಧಿಕಾರಿಗಳ ಮೇಲೆ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದೆ ಕೋರ್ಟ್. ತತ್ ಕ್ಷಣದಿಂದ ಆರೋಪಿಗಳನ್ನು ಅರೆಸ್ಟ್ ಮಾಡಲು ಸೂಚನೆ ನೀಡಲಾಗಿದೆ. ಈ ಆದೇಶವನ್ನು ಎಲ್ಲಾ ಜೈಲುಗಳಿಗೂ ನೀಡಲು ಸೂಚನೆ ನೀಡಿದೆ. ಜೈಲಿನಲ್ಲಿದ್ದಾಗ ನಡವಳಿಕೆ ಹೇಗಿತ್ತು, ಜೈಲಿನಿಂದ ಬಂದಾಗ ನಡವಳಿಕೆ ಹೇಗಿತ್ತು ಎಂಬೆಲ್ಲಾ ಮಾಹಿತಿಯನ್ನು ನೀಡಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಹದಿನೇಳು ಮಂದಿ ಮತ್ತೆ ಜೈಲು ಪಾಲಾಗಲಿದ್ದಾರೆ. ಈಗಿನಿಂದ ಅರೆಸ್ಟ್ ಮಾಡುವ ಅಧಿಕಾರವನ್ನು ಕೋರ್ಟ್ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *