ಬೆಂಗಳೂರು: ನಟ ದರ್ಶನ್ ತಮ್ಮ ಬಿನ್ನು ನೋವಿನ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದಿದ್ದಾರೆ. ನಿನ್ನೆಯೇ ಆಸ್ಪತ್ರೆಗೆ ಅಡ್ಮಿಟ್ ಆಗಬೇಕಿತ್ತು. ಆದರೆ ಒಂದು ದಿನ ರೆಸ್ಟ್ ಮಾಡಿ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿ ಸಲ ಮೈಸೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈ ಬಾರಿ ಜ್ಯುಡಿಯಲ್ ವ್ಯಾಪ್ತಿಯಲ್ಲಿಯೇ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕಾಗಿರುವ ಕಾರಣ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದರ್ಶನ್ ಅವರಿಗೆ ವಿಪರೀತ ಬೆನ್ನು ನೋವು ಬಂದಿರುವ ಕಾರಣ ನಿಲ್ಲಲು ಆಗದ, ಕೂರಲು ಆಗದ ಪರಿಸ್ಥಿತಿಯಲ್ಲಿದ್ದಾರೆ. ಹೊಸಕೆರೆಹಳ್ಳಿಯಲ್ಲಿರುವ ವಿಜಯಲಕ್ಷ್ಮೀ ಅಪಾರ್ಟ್ಮೆಂಟ್ ನಲ್ಲಿಯೇ ದರ್ಶನ್ ಉಳಿದುಕೊಂಡಿದ್ದಾರೆ. ಇಂದು ಅಲ್ಲಿಂದಾನೇ ಆಸ್ಪತ್ರೆಗೆ ಬಂದಿದ್ದರು. ಆದರೆ ಬಿಜಿಎಸ್ ಆಸ್ಪತ್ರೆ ಬಳಿ ಕಾರಿನಿಂದ ಇಳಿಯುವಾಗ ದರ್ಶನ್ ಸುಸ್ತಾಗಿರುವುದು ಕಾಣಿಸುತ್ತಿತ್ತು. ವಿಪರೀತ ಬೆನ್ನು ನೋವಿನಿಂದ ಕುಂಟುತ್ತಲೇ ಆಸ್ಪತ್ರೆಗೆ ಬಂದರು.
ದರ್ಶನ್ ಸ್ಥಿತಿ ಕಂಡು ಫ್ಯಾನ್ಸ್ ಮರುಗಿದ್ದಾರೆ. ಆದಷ್ಟು ಬೇಗ ಹುಷಾರಾಗಿ ಬಾಸ್ ಎಂದು ಅಲ್ಲಿಂದಾನೇ ಕಿರುಚಿದ್ದಾರೆ. ಆದರೆ ಅಭಿಮಾನಿಗಳಿಗೆ ರಿಯಾಕ್ಟ್ ಮಾಡುವುದಕ್ಕೆ ದರ್ಶನ್ ಅವರಿಗೆ ತ್ರಾಣವಿರಲಿಲ್ಲ. ವಿಜಯಲಕ್ಷ್ಮೀ, ತಂಗಿ ಗಂಡ, ನಟ ಧನ್ವೀರ್ ಕೂಡ ಆಸ್ಪತ್ರೆಗೆ ಬಂದಿದ್ದರು. ನಿಧಾನವಾಗಿಯೇ ನಡೆದು ಆಸ್ಪತ್ರೆ ಒಳಗೆ ಹೋದರು. ಈಗಾಗಲೇ ಎಂಆರ್ಐ ಸ್ಕ್ಯಾನ್ ಎಲ್ಲಾ ಮಾಡಿಸಿದ್ದಾರೆ. ಆದರೆ ಮತ್ತೊಮ್ಮೆ ಸ್ಕ್ಯಾನಿಂಗ್ ಕಳುಹಿಸಲಾಗುತ್ತಿದೆ ಎನ್ನಲಾಗಿದೆ. ಸ್ಪೆಷಲ್ ವಾರ್ಡ್ ನಲ್ಲಿ ದರ್ಶನ್ ಅವರಿಗೆ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ಮೊದಲು ಫಿಸಿಯೋ ಥೆರಪಿ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಗಮನ ಹರಿಸುತ್ತಾರೆ. ಸದ್ಯ ವಿಜಯಲಕ್ಷ್ಮೀ ಅವರು ಇರು ಅಪಾರ್ಟ್ಮೆಂಟ್ ಹಾಗೂ ಬಿಜಿಎಸ್ ಆಸ್ಪತ್ರೆ ಬಳಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.