ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಜೈಲು ಊಟ ಸರಿ ಹೊಂದುತ್ತಿಲ್ಲ. ತೂಕ ಕಡಿಮೆಯಾಗುವುದು, ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತಿರುವುದು ಆಗುತ್ತಿದೆ. ಹೀಗಾಗಿ ಮನೆ ಊಟ, ಹಾಸಿಗೆ, ಪುಸ್ತಕಕ್ಕಾಗಿ ದರ್ಶನ್ ಪರ ವಕೀಲರು ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ನಿನ್ನೆಯೇ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ಇಂದು ಚರ್ಚಿಸುವ ಬಗ್ಗೆ ತಿಳಿಸಿತ್ತು.
ಇಂದು ಮತ್ತೆ ದರ್ಶನ್ ಅವರ ಅರ್ಜಿ ವಿಚಾರಣೆ ನಡೆದಿದೆ. ಈ ವೇಳೆ ಹೈಕೋರ್ಟ್ ಪ್ರಶ್ನೆ ಮಾಡಿದ್ದು, ಆಹಾರ ಮೂಲಭೂತ ಹಕ್ಕು. ಆದರೆ ಮನೆ ಊಟ ಮೂಲಭೂತ ಹಕ್ಕು ಅಂತ ಏನಿಲ್ಲ. ಜೈಲಿನ ಐದು ಸಾವಿರ ಖೈದಿಗಳು ಮನೆ ಊಟವನ್ನೇ ಕೇಳಿದರೆ ಏನು ಮಾಡುವುದು ಎಂದು ಪ್ರಶ್ನಿಸಿದೆ.
ಇನ್ನು ಮನೆ ಊಟದ ಬೇಡಿಕೆಯ ಬಗ್ಗೆ ಮ್ಯಾಜಿಸ್ಟ್ರೇಟ್ ಮುಂದೆ ಫೈಲ್ ಮಾಡಿ. ಪ್ರಾವಿಷನ್ಸ್ ಬಗ್ಗೆ ನೀವೂ ಸಲ್ಲಿಕೆ ಮಾಡಿ. ಆಕ್ಷೇಪಣೆಯನ್ನು ಸರ್ಕಾರ ಸಲ್ಲಿಕೆ ಮಾಡಲಿ. ಮ್ಯಾಜಿಸ್ಟ್ರೇಟ್ ಕಾನೂನಿನ ಅಡಿಯಲ್ಲಿ ಇದನ್ನ ನಿರ್ಧಾರ ಮಾಡಲಿ. ಜುಲೈ 27ರ ಒಳಗೆ ಮ್ಯಾಜಿಸ್ಟ್ರೇಟ್ ನಿರ್ಧಾರ ಮಾಡಲಿ ಎಂದು ಹೈಕೋರ್ಟ್ ಏಕಸದಸ್ಯ ಪೀಠ ತೀರ್ಮಾನ ಕೊಟ್ಟಿದೆ. ಉಳಿದಂತೆ ದರ್ಶನ್ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿಕೆ ಮಾಡಿದೆ.
ದರ್ಶನ್ ಕೊಲೆ ಕೇಸಲ್ಲಿ ಬಂಧನವಾಗಿ ಒಂದೂವರೆ ತಿಂಗಳು ಕಳೆದಿದೆ. ಆದರೆ ದರ್ಶನ್ ಪರ ವಕೀಲರು ಇನ್ನು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಬಳಿಕವೇ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ.