ದಲಿತರು ಕಾಂಗ್ರೆಸ್ಸಿನ ಗುಲಾಮರಲ್ಲ : ಬಿ.ಶ್ರೀರಾಮುಲು

3 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮಾ. 08 : ಹಿಂದಿನ ಬಿಜೆಪಿ ಸರ್ಕಾರವು ಮೂರು ದಶಕಗಳ ಹೋರಾಟಕ್ಕೆ ಮನ್ನಣೆ ನೀಡಿ ಎಸ್‍ಸಿ, ಎಸ್‍ಟಿ ಒಳಮೀಸಲಾತಿ ಹಂಚಿಕೆ ಮಾಡಿತ್ತು. ಆದರೆ ಇಂದು ಕಾಂಗ್ರೆಸ್ ಸರ್ಕಾರ ನಮ್ಮ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಮಾಜಿ ಸಚಿವ. ಬಿ.ಶ್ರೀರಾಮುಲು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.

ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬೃಹತ್ ಜನಾಂದೋಲನ ಸಭೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದಲಿತರು ಕಾಂಗ್ರೆಸ್ಸಿನ ಗುಲಾಮರಲ್ಲ. ಮೀಸಲಾತಿ ಹೆಚ್ಚಿಸಿದ್ದು ಅಂಬೇಡ್ಕರ್ ಅವರ ಕೊಡುಗೆಯೇ ಹೊರತು ಸಿದ್ದರಾಮಯ್ಯ ಅವರದ್ದಲ್ಲ. ಈಗ ಮೀಸಲಾತಿ ಕಡಿತದಿಂದ ನೀಟ್ ಹಾಗೂ ಸಿಇಟಿ ಬರೆದ ಲಕ್ಷಾಂತರ ಮಕ್ಕಳ ಭವಿಷ್ಯ ಮಂಕಾಗಿದೆ ಎಂದರು.

ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಕರ್ನಾಟಕದ ಪರಿಶಿಷ್ಟರು ಅಜ್ಞಾನಿಗಳು ಎಂದು ಕಾಂಗ್ರೆಸ್ ಭಾವಿಸಿದೆ. ಮೀಸಲಾತಿ ಎಂದರೆ ಕೇವಲ ಹಾಸ್ಟೆಲ್ ತೆರೆಯುವುದಲ್ಲ, ಅದು ನಮ್ಮ ಹಕ್ಕು. ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು 42 ಸಾವಿರ ಕೋಟಿ ರೂ. ಎಸ್‍ಸಿಪಿ/ಟಿಎಸ್‍ಪಿ ಹಣವನ್ನು ಗ್ಯಾರೆಂಟಿಗಳಿಗೆ ಡೈವರ್ಟ್ ಮಾಡಿದ್ದಾರೆ. ಈ ಅನ್ಯಾಯದ ವಿರುದ್ಧ ಐದಾರು ಜಿಲ್ಲೆಗಳ ಜನತೆ ತೊಡೆ ತಟ್ಟಿದರೆ ಸರ್ಕಾರ ಉಳಿಯುವುದಿಲ್ಲ. ಎಂದರು.

ಸಂಸದ ಗೋವಿಂದ ಎಂ. ಕಾರಜೋಳ ಮಾತನಾಡಿ,  ಶೋಷಿತರು, ನಿರ್ಲಕ್ಷ್ಯಕ್ಕೆ ಒಳಗಾದವರ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಆದರೆ, ಕಾಂಗ್ರೆಸ್ ಕುಮ್ಮಕ್ಕಿನಿಂದ ಶೇ.56 ರಷ್ಟಿದ್ದ ಮೀಸಲಾತಿ ಪ್ರಮಾಣಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಬಂದಿದೆ. ಇದಕ್ಕೆ ಮೇಲ್ಮನವಿ ಸಲ್ಲಿಸಿಲ್ಲ ಎಂದು ಸರ್ಕಾರದ ಕ್ರಮವನ್ನು ಟೀಕಿಸಿದರು.

ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ  ನಮ್ಮ ಹಕ್ಕುಗಳನ್ನು ಶಾಸನ ಸಭೆಯಲ್ಲಿ ಹಾಗೂ ಸರ್ಕಾರದಲ್ಲಿ ರಕ್ಷಣೆ ಮಾಡಿಕೊಳ್ಳಲು ಆಗದಿದ್ದರೆ ಜನರ ಬಳಿಗೆ ಹೋಗಿ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಆ ಕೆಲಸವನ್ನು ಬಿಜೆಪಿ ಮೂಲಕ ಪರಿಶಿಷ್ಟರು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮಾಜಿ ಸಚಿವ ಶಿವನಗೌಡ ನಾಯಕ ಮಾತನಾಡಿ. ಮದಕರಿ ನಾಯಕರ ಜನ್ಮಭೂಮಿಯಲ್ಲಿ ಸರ್ಕಾರದ ವಿರುದ್ಧ ಹೋರಾಟಕಕೆ ತೀರ್ಮಾನ ಮಾಡಿದ್ದೇವೆ. ಇದು ಮಾಡು ಇಲ್ಲವೆ ಮಡಿ ಹೋರಾಟ. ಸತ್ತರೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಪರಿಶಿಷ್ಟರ ಮೀಸಲಾತಿ ಪಡೆದೇ ಮನೆ ಸೇರುತ್ತೇವೆ ಎಂದು ತೀರ್ಮಾನಿಸಲು ತಿಳಿಸಿದರು.

ಹೊಳಲ್ಕೆರೆ ಶಾಸಕ ಡಾ. ಎಂ.ಚಂದ್ರಪ್ಪ ಮಾತನಾಡಿ ಕಳೆದ ಚುನಾವಣೆ ಸಂದರ್ಭದಿಂದಲೇ ಕಾಂಗ್ರೆಸ್ ಮೀಸಲಾತಿ ಕುರಿತು ಗೊಂದಲ ಮೂಡಿಸಿ ನಮ್ಮ ಸರ್ಕಾರ ಕೆಡವಿದೆ. ಈಗ ಚಿತ್ರದುರ್ಗದಿಂದ ಹೋರಾಟ ಪ್ರಾರಂಭವಾಗಲಿ ಎಂದರು.

ಮಾಜಿ ಶಾಸಕ. ರಾಜುಗೌಡ ಮಾತನಾಡಿ ಇದು ನಮ್ಮ ಅಳಿವು, ಉಳಿವಿನ ಪ್ರಶ್ನೆ. ಗುರಿ ಮುಟ್ಟುವವರೆಗೆ ಹೋರಾಟ ನಡೆಯಲಿ. ಮೀಸಲಾತಿ ಕೈ ತಪ್ಪಿದರೆ ಪರಿಶಿಷ್ಟರ ನಾಲ್ಕು ಸಾವಿರ ಹುದ್ದೆಗಳು ಕೈ ತಪ್ಪಲಿವೆ. ಇದು ನಮ್ಮ ಉಳಿವಿಗಾಗಿ ನಡೆಯುತ್ತಿರುವ ಹೋರಾಟ ಅಲ್ಲ. ಸಮುದಾಯದ ಉಳಿವಿಗಾಗಿ ಎಂದು ತಿಳಿಸಿದರು.

ಹೋರಾಟದ ನೇತೃತ್ವ ವಹಿಸಿರುವ ಮಾಜಿ ಶಾಸಕ ಕುಡುಚಿ ರಾಜೀವ್ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಕಡಿತ ಮಾಡಿ ಹುದ್ದೆಗಳ ನೇಮಕಾತಿ ವಿರೋಧಿಸಿ ಬಿಜೆಪಿಯಿಂದ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿದೆ  ಮಾರ್ಚ್ 22 ರಿಂದ ಚಿತ್ರದುರ್ಗದಿಂದ ಬೃಹತ್ ಹೋರಾಟದ ಪಾದಯಾತ್ರೆ ಆರಂಭವಾಗಲಿದ್ದು, ಒಂದು ಲಕ್ಷ ಜನ ಸೇರಲಿದ್ದಾರೆ ಎಂದರು.

ಮಾರ್ಚ್ 27 ರಂದು ಬೆಂಗಳೂರು ಪ್ರವೇಶ ಮಾಡಲಿದ್ದು, ಸರ್ಕಾರ ಆರಂಭದಲ್ಲೇ ನಮ್ಮ ಬಳಿ ಬಂದು ಎಸ್ಸಿ, ಎಸ್ಟಿ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ದಿನ ದಿನಕ್ಕೂ ಹೋರಾಟ ತೀವ್ರಗೊಳ್ಳುತ್ತದೆ. ಬೆಂಗಳೂರು ತಲುಪಿದ ಬಳಿಕೆ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿ ಚುನಾವಣೆ ಪೂರ್ವದಲ್ಲಿ ಚಿತ್ರದುರ್ಗದಲ್ಲಿ ಪರಿಶಿಷ್ಟರ ಸಮಾವೇಶ ನಡೆಸಿದ್ದ ಕಾಂಗ್ರೆಸ್ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿತ್ತು. ಆದರೆ, ಸರ್ಕಾರ ಬಂದ ದಿನದಿಂದಲೂ ಅನ್ಯಾಯ ಮಾಡಿಕೊಂಡು ಬರುತ್ತಿದ್ದು, ಇದನ್ನು ಖಂಡಿಸಿ ಚಿತ್ರದುರ್ಗದಿಂದಲೇ ಹೋರಾಟಕ್ಕೆ ಕರೆ ಕೊಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಬಂಗಾರು ಹನುಮಂತು, ಸಿಮೆಂಟ್ ಮಂಜು, ಬಸವರಾಜ ದಡೆಸೂಗುರು, ಮಾಜಿ ಸಂಸದ ಉಮೇಶ್ ಜಾಧವ್, ಪ್ರತಾಪ್ ಗೌಡ, ಕೆ.ಟಿ.ಕುಮಾರಸ್ವಾಮಿ, ಉಮೇಶ್ ಕಾರಜೋಳ, ಮಾದಿಗ ದಂಡೋರದ ನರಸಪ್ಪ, ಫರ್ನಾಂಡಿಸ್, ಶಾಸಕಿ ಹೇಮಲತಾ ನಾಯಕ, ವೈ.ಸಂಪಂಗಿ, ದಿವಾಕರ್, ಬಳ್ಳಾರಿ ಹನುಮಂತಪ್ಪ, ಭಾರ್ಗವಿ, ದೀಪಕ್ ದೊಡ್ಡಯ್ಯ, ಸಂಜೀವ ಹೆಗಡೆ, ಸಾಮರಸ್ಯ ವಾದಿರಾಜ್, ಬಾಳೆಕಾಯಿ ರಾಮದಾಸ್ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Share This Article