ಸುದ್ದಿಒನ್, ನವದೆಹಲಿ, ಅಕ್ಟೋಬರ್.18 : ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಮತ್ತೊಮ್ಮೆ ಸಿಹಿಸುದ್ದಿ ನೀಡಿದೆ. ದಸರಾ ಹಾಗೂ ದೀಪಾವಳಿ ಹಬ್ಬಕ್ಕೂ ಮುನ್ನವೇ ಸರ್ಕಾರದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ.
ಅಕ್ಟೋಬರ್ 18 (ಬುಧವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (ಡಿಎ) ಮತ್ತೆ ಶೇ.4ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದೆ. ಈ ಹೆಚ್ಚಳದಿಂದ ಇದುವರೆಗೆ ಶೇ.42ರಷ್ಟಿದ್ದ ಕೇಂದ್ರ ಸರ್ಕಾರಿ ನೌಕರರ ಡಿಎ ಶೇ.46ಕ್ಕೆ ಏರಿಕೆಯಾಗಲಿದೆ. ಈ ಡಿಎ ಹೆಚ್ಚಳ ಜುಲೈ 1 ರಿಂದ ಜಾರಿಗೆ ಬರಲಿದೆ.
ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಡಿಎ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ಡಿಎ ಹೆಚ್ಚಳ ನಿರ್ಧಾರದಿಂದ 48.67 ಲಕ್ಷ ಸರ್ಕಾರಿ ನೌಕರರು ಮತ್ತು 67.95 ಲಕ್ಷ ಸರ್ಕಾರಿ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಅಂದರೆ, ಈ ಡಿಎ ಹೆಚ್ಚಳದಿಂದ ಸುಮಾರು 1.1 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ. ಈ ಡಿಎ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ರೂ. 12,867 ಕೋಟಿ ಹೊರೆಯಾಗಲಿದೆ.