ಸುದ್ದಿಒನ್, ಚಿತ್ರದುರ್ಗ,(ಮೇ.27) : ರಾಜ್ಯದ ನೂತನ ಸಚಿವರ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಶುಕ್ರವಾರ ಬಿಡುಗಡೆ ಮಾಡಿದೆ. ಅದರಂತೆ 24 ನೂತನ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಬಾರಿ ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಪ್ರಾತಿನಿಧ್ಯ ದೊರೆತಿದ್ದು, ಸಂಪುಟದಲ್ಲಿ ಸಚಿವರಾಗಿ ಹಿರಿಯೂರು ಕ್ಷೇತ್ರದ ಶಾಸಕ ಡಿ.ಸುಧಾಕರ್ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ, ರಾಜ್ಯದಲ್ಲಿಯೇ ಅದೃಷ್ಟ ಕ್ಷೇತ್ರವೆಂಬ ಪ್ರತೀತಿ ಹೊಂದಿರುವ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿಯೂ ಸಚಿವ ಸ್ಥಾನ ಒಲಿದು ಬಂದಿರುವುದು ವಿಶೇಷ.
ಕಾಂಗ್ರೆಸ್ಸಿನ ಕೆ.ಎಚ್.ರಂಗನಾಥ್ – ಜನತಾ ಪರಿವಾರದ ಡಿ.ಮಂಜುನಾಥ್ ದಶಕಗಳ ಕಾಲ ಇವರಿಬ್ಬರೂ ಕ್ಷೇತ್ರದಿಂದ ಅವರ್ ಬಿಟ್ಟರೇ ಇವರು, ಇವರು ಬಿಟ್ಟರೆ ಅವರು ಎಂಬಂತೆ ಗೆಲುವು ಸಾಧಿಸುವ ಮೂಲಕ ನಿರಂತರವಾಗಿ ಸಚಿವರಾಗುತ್ತಲೇ ಇದ್ದರು.
ಬಳಿಕ ಎಸ್ಸಿ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರಕ್ಕೆ ಬದಲಾದ ಬಳಿಕ 2008ರಲ್ಲಿ ಡಿ.ಸುಧಾಕರ್, ಕ್ಷೇತ್ರಕ್ಕೆ ಬಂದು ಕೇವಲ 20 ದಿನದಲ್ಲಿ ಪಕ್ಷೇತರರಾಗಿ ಗೆಲುವು ಸಾಧಿಸಿದ್ದರು. ಅಷ್ಟೇ ಅಲ್ಲದೇ ಅಂದಿನ ಬಿಜೆಪಿ ಸರ್ಕಾದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಆ ಮೂಲಕ ಮೊದಲ ಬಾರಿಗೆ ಡಿ. ಸುಧಾಕರ್ ಅವರು ಸಚಿವರಾಗಿದ್ದರು.
ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಬಿಜೆಪಿ, ಪ್ರಾದೇಶಿಕ ಪಕ್ಷ ಜನತಾಪರಿವಾರ, ಪಕ್ಷೇತರ ಹೇಗೆಯೇ ಆಗಲಿ ಈ ಕ್ಷೇತ್ರದಿಂದ ಗೆದ್ದವರೆಲ್ಲರೂ ಮಂತ್ರಿಗಳಾಗಿದ್ದಾರೆ. ಆದರೆ ಈ ಬಾರಿ 2023 ರ ಚುನಾವಣೆಯಲ್ಲಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರ ವಿರುದ್ಧ ಗೆದ್ದು, ಮತ್ತೆ ಸಚಿವರಾಗುವ ಮೂಲಕ ಅದೃಷ್ಟ ಕ್ಷೇತ್ರವೆಂಬ ಪ್ರತೀತಿಗೆ ಮತ್ತಷ್ಟು ಬಲ ಬಂದಿದೆ.
2023 ರ ಚುನಾವಣೆಯಲ್ಲಿ ಫಲಿತಾಂಶ ಬಂದ ದಿನದಂದಲೇ ಜಿಲ್ಲೆಯಲ್ಲಿ ಸಚಿವರು ಯಾರಾಗುತ್ತಾರೆಂಬ ಚರ್ಚೆಗಳು ಜೋರಾಗಿ ನಡೆಯುತ್ತಿದ್ದವು. ಅಂತಿಮವಾಗಿ ಡಿ ಸುಧಾಕರ್ ಅವರಿಗೆ ಸಚಿವ ಸ್ಥಾನ ದೊರೆತಿದೆ. ಇಂದು (ಶನಿವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾಗ್ತಾರಾ ?
ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಐವರು ಶಾಸಕರಾಗಿದ್ದಾರೆ. ಈ ಪೈಕಿ ಡಿ.ಸುಧಾಕರ್ ಅವರು ಮಾತ್ರ ಸಚಿವರಾಗಿದ್ದಾರೆ. ಹಾಗಾಗಿ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ ಎಂದು ಹೇಳಲಾಗುತ್ತಿದೆ.
ಹೆಚ್. ಏಕಾಂತಯ್ಯ ನವರ ನಂತರ ಪ್ರತಿ ಬಾರಿಯೂ ಹೊರಗಿನವರಿಗೇ ಜಿಲ್ಲೆಯ ಉಸ್ತುವಾರಿಯ ಹೊಣೆಗಾರಿಕೆಯನ್ನು ನೀಡಲಾಗಿದೆ. ಹಾಗಾಗಿ ಈ ಬಾರಿಯಾದರೂ ನಮ್ಮ ಜಿಲ್ಲೆಯವರಿಗೇ ಉಸ್ತುವಾರಿ ನೀಡಬೇಕೆಂಬ ಒತ್ತಡವಿದೆ. ಇನ್ನೂ ಜಿಲ್ಲೆಯವರೆ ಉಸ್ತುವಾರಿ ಸಚಿವರಾದರೆ ಇಲ್ಲಿಯ ಸಮಸ್ಯೆಗಳು, ಜನರ ಬೇಡಿಕೆಗಳನ್ನು ಅರಿತು ಈಡೇರಿಸಲು ಸುಲಭವಾಗಲಿದೆ ಎಂಬುದು ಜಿಲ್ಲೆಯ ಜನರ ಆಪೇಕ್ಷೆಯಾಗಿದೆ.