CWC 2023 India vs Australia: ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಭಾರತ

2 Min Read

 

ಸುದ್ದಿಒನ್ : 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ.  ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸಿ ಮೊದಲ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ.

ಆರಂಭದಲ್ಲಿ ಆಸೀಸ್ ತಂಡವನ್ನು 199 ರನ್ ಗಳಿಗೆ ಸೀಮಿತಗೊಳಿಸಿದ ಭಾರತ ಚೇಸಿಂಗ್ ನಲ್ಲಿ ಒಂದು ಹಂತದಲ್ಲಿ 2 ರನ್ ಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ 165 ರನ್ ಜೊತೆಯಾಟದಲ್ಲಿ ತಂಡಕ್ಕೆ ಆಸರೆಯಾದರು.

ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ 49.3 ಓವರ್‌ಗಳಲ್ಲಿ 199 ರನ್‌ಗಳಿಗೆ ಆಲೌಟಾಯಿತು.
ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸುವುದರ ಹೊರತಾಗಿ ವಿಕೆಟ್‌ಗಳನ್ನು ಉಳಿಸಿಕೊಳ್ಳಲು ಹೆಣಗಾಡಿದರು.

ಬುಮ್ರಾ ಮೂರನೇ ಓವರ್‌ನಲ್ಲಿ ಮಿಚೆಲ್ ಮಾರ್ಷ್ ಅವರನ್ನು ಔಟ್ ಮಾಡಿದರು. ಒಂದು ಹಂತದಲ್ಲಿ, ಸ್ಟೀವ್ ಸ್ಮಿತ್ ಮತ್ತು ಲ್ಯಾಬುಸ್ಚೆನ್ನೆ ಉತ್ತಮ ಪ್ರದರ್ಶನದೊಂದಿಗೆ 110/2 ಗಳಿಸಿ ಆಸೀಸ್ ಚೇತರಿಸಿಕೊಂಡಂತೆ ತೋರುತ್ತಿತ್ತು. ಆ ನಂತರ ಭಾರತದ ಬೌಲರ್‌ಗಳ ದಾಳಿಗೆ ಸತತ ವಿಕೆಟ್ ಕಳೆದುಕೊಂಡ ಆಸೀಸ್ 3 ಎಸೆತಗಳು ಬಾಕಿ ಇರುವಾಗಲೇ ಆಲ್ ಔಟಾಯಿತು.

ಬಳಿಕ ಅಲ್ಪ ಗುರಿಯೊಂದಿಗೆ ಕಣಕ್ಕೆ ಇಳಿದ ಭಾರತಕ್ಕೆ ಆರಂಭದಲ್ಲೇ ದೊಡ್ಡ ಆಘಾತ ಎದುರಾಯಿತು.
ಆರಂಭಿಕರಾದ ರೋಹಿತ್ ಶರ್ಮಾ, ಇಶಾನ್ ಕಿಶನ್ ಸೇರಿದಂತೆ ಶ್ರೇಯಸ್ ಅಯ್ಯರ್ ಯಾವುದೇ ರನ್ ಗಳಿಸದೇ ಪೆವಿಲಿಯನ್ ತಲುಪಿದರು. ಈ ಪರಿಸ್ಥಿತಿಯಲ್ಲಿ 200 ರನ್‌ಗಳ ಗುರಿ ದೊಡ್ಡದಾಗಿ ಕಾಣಿಸಿತು.  ಆದರೆ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಇನ್ನಿಂಗ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರು. 4ನೇ ವಿಕೆಟ್ ಗೆ 165 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. 85 ರನ್ ಗಳಿಸಿ ಕೊಹ್ಲಿ ಔಟಾದರೂ ಆಗಲೇ ಟೀಂ ಇಂಡಿಯಾ ಗೆಲುವು ಖಚಿತವಾಗಿತ್ತು. ಕೆಎಲ್ ರಾಹುಲ್ (ಔಟಾಗದೆ 97) ಹಾರ್ಡಿಂಕ್ ಪಾಂಡ್ಯ (11) ರನ್‌ಗಳೊಂದಿಗೆ ಗೆಲುವಿನ ಗುರಿ ತಲುಪಿದರು. ಭಾರತ ಇನ್ನೂ 52 ಎಸೆತಗಳು ಬಾಕಿ ಇರುವಾಗಲೇ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಭಾರತದ ಖಾತೆಗೆ ಎರಡು ಅಂಕ ಸೇರ್ಪಡೆಯಾಗಿದೆ. ಭಾರತ ತನ್ನ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಅಕ್ಟೋಬರ್ 11 ರಂದು ಎದುರಿಸಲಿದೆ. ಈ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *