ಚಿತ್ರದುರ್ಗ : ನೆಹರುನಗರದಲ್ಲಿರುವ ಕೊಳಚೆ ಪ್ರದೇಶದಲ್ಲಿ 8.40 ಲಕ್ಷ ರೂ.ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್‍ಸಿದ್ದಾಪುರ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿ ನಂತರ ಮಾತನಾಡಿದ ಜಿ.ಟಿ.ಸುರೇಶ್‍ಸಿದ್ದಾಪುರ ಲೇಔಟ್ ಹಾಗೂ ಕಟ್ಟಡ ಪರವಾನಗಿ ಪಡೆಯುವವರಿಂದ ಸಂಗ್ರಹಿಸುವ ಶುಲ್ಕದ ಹಣದಲ್ಲಿ ನಿರ್ಮಾಣವಾಗಲಿರುವ ಅಂಗನವಾಡಿಯ ಕೇಂದ್ರದಲ್ಲಿ ಸೊನ್ನೆಯಿಂದ ಆರು ವರ್ಷದೊಳಗಿನ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡಲಾಗುವುದಲ್ಲದೆ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಬಿಸಿಯೂಟವನ್ನು ನೀಡಲಾಗುತ್ತದೆ.
ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ಒದಗಿಸಲಾಗುವುದು. ಚುಚ್ಚುಮದ್ದು, ಆರೋಗ್ಯ ತಪಾಸಣೆಯನ್ನು ನಡೆಸಿ ಕಾಳಜಿ ವಹಿಸಲಾಗುವುದು. ಸುತ್ತಮುತ್ತಲಿನ ಕೊಳಗೇರಿ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರುಗಳಾದ ಎ.ರೇಖ, ಉಷಭಾಯಿ, ಡಿ.ರಾಜು, ನಗರಸಭೆ ಸದಸ್ಯರುಗಳಾದ ಭಾಗ್ಯಮ್ಮ, ಹರೀಶ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಟೌನ್ ಪ್ಲಾನರ್ ಆಶೀಫುಲ್ಲಾ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಸುಧಾ, ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಹತೀಕಾಖಾನಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.