ಚಿತ್ರದುರ್ಗ, (ಸೆ.04): ಮಳೆಗಾಲ ಜೋರಾಗಿದ್ದು ಎಲ್ಲೆಡೆ ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ಎಷ್ಟೋ ವರ್ಷಗಳು ಬತ್ತಿ ಹೋಗಿದ್ದ ಜಲಾಶಯಗಳು ಆರಂಭದಲ್ಲಿಯೇ ತುಂಬಿ ಹರಿಯುತ್ತಿವೆ. ಇದೀಗ ಸುಮಾರು 89 ವರ್ಷದ ಬಳಿಕ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಗ್ರಾಮದ ಬಳಿ ಇರುವ ಮಾರಿಕಣಿವೆ ಅಣೆಕಟ್ಟು ಭರ್ತಿಯಾಗಿದೆ.
ಈ ಜಲಾಶಯ 1933ರಲ್ಲಿ ತುಂಬಿತ್ತು. ಹೀಗಾಗಿ ಜನ ನೋಡಲು ಕಿಕ್ಕಿರಿದು ಬಂದಿದ್ದರು. ಇಂದು ಭಾನುವಾರವಾಗಿದ್ದರಿಂದ ಬೆಳಗ್ಗೆಯಿಂದಲೇ ಪ್ರವಾಸಿಗರ ದಂಡು ಮಾರಿಕಣಿವೆಯೆಡೆಗೆ ಹೆಜ್ಜೆ ಹಾಕಿದ್ದರು. ಜಲಾಶಯ, ಕಣಿವೆ ಮಾರಮ್ಮ ದೇವಸ್ಥಾನ, ಪಾರ್ಕ್, ಪ್ರವಾಸಿ ಮಂದಿರ, ಡ್ಯಾಂ ಕೋಡಿ ಬಿದ್ದಿರುವ ಜಾಗ ಹಾಗೂ ಹಾರನ ಕಣಿವೆ ರಂಗನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ಡ್ಯಾಂ ಸುತ್ತ ಮುತ್ತಲಿನ ಪ್ರದೇಶ ನೋಡಲು ಪ್ರವಾಸಿಗರು ಬಂದಿದ್ದರು. ಪ್ರವಾಸಿಗರು ಕೋಡಿ ನೀರಲ್ಲಿ ನೆನೆದು ಮಿಂದೆದ್ದರು. ಕೆಲವರು ಕೈಕಾಲು ಮುಖ ತೊಳೆದರೆ ಇನ್ನು ಕೆಲವರು ಸ್ನಾನವೇ ಮಾಡಿದರು.
ಡ್ಯಾಂ ನೋಡಲು ಬಂದವರು ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಚಿತ್ರಣ ಸಾಮಾನ್ಯವಾಗಿತ್ತು. ಮತ್ತು ಮೊಬೈಲ್ ನಲ್ಲಿ ಸೆರೆ ಹಿಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಂಭ್ರಮಿಸಿದ್ದು ಕಂಡು ಬಂತು.
ದೂರ ದೂರದಿಂದಲೂ ಜಲಾಶಯ ನೋಡಲು ಪ್ರವಾಸಿಗರು ಬಂದಿದ್ದರು. ಅಂದಾಜು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಇಂದು ಒಂದೇ ದಿನ ಡ್ಯಾಂ ನೋಡಲು ಬಂದಿದ್ದರು. ಚಿತ್ರದುರ್ಗ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಪ್ರವಾಸಿಗರು, ಆಟೋ, ಕಾರು, ಬೈಕ್, ಬಸ್ ಸೇರಿದಂತೆ ಹಲವು ವಾಹನಗಳಲ್ಲಿ ಬಂದಿದ್ದರು. ಇದರಿಂದಾಗ ಹೆವಿ ಟ್ರಾಫಿಮ್ ಜಾಮ್ ಉಂಟಾಗಿತ್ತು.
ಜಲಾಶಯ ಸರ್ಕಲ್ ನಿಂದ, ಮಾರಿಕಣಿವೆ ಗ್ರಾಮ, ಕೋಡಿ ಬೀಳುವ ಜಾಗ ಹಾಗೂ ಹೊಸದುರ್ಗ ರಸ್ತೆಗೆ ಸುಮಾರು 3 ಕಿಲೋಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.