ಚಿತ್ರದುರ್ಗ: ಬೆಲೆ ಕುಸಿತದಿಂದ ರೈತ ಬೆಳೆಯುವ ಎಲ್ಲಾ ಬೆಳೆಗಳು ನಾಶವಾಗುತ್ತಿದೆ. ಸರ್ಕಾರ-ರೈತರ ನಡುವೆ ತಿಕ್ಕಾಟ ಆರಂಭವಾಗಿದೆ. ಇದ್ಯಾವುದರ ಪರಿವೆ ಇಲ್ಲದ ದೇಶದ ಪ್ರಧಾನಿ ನರೇಂದ್ರಮೋದಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳುತ್ತಿದ್ದಾರೆ. ಹೇಗೆ ಸಾಧ್ಯ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಖಾರವಾಗಿ ಪ್ರಶ್ನಿಸಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸೋಮಗುದ್ದು ರಂಗಸ್ವಾಮಿ ಕೃಷಿಯ ಕಷ್ಟ ಏನು ಎಂಬುದು ರೈತರಿಗೆ ಗೊತ್ತೆ ವಿನಃ ಆಡಳಿತ ನಡೆಸುತ್ತಿರುವ ಅಧಿಕಾರಿಗಳಿಗಾಗಲಿ ಶಾಸಕ, ಸಚಿವರಿಗೇನು ಗೊತ್ತು. ಇನ್ನಾದರೂ ಅಧಿಕಾರಿಗಳು, ರಾಜಕಾರಣಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಚುನಾವಣೆಗೆ ಗ್ರಾಮಗಳಿಗೆ ಬಂದರೆ ಒದ್ದು ಗದುಮುತ್ತೇವೆ ಎಂದು ಗರಂ ಆಗಿ ನುಡಿದರು.
ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ, ಹೊನ್ನಾಳಿ ಶಾಸಕರು ಹಾಗೂ ಚಿತ್ರದುರ್ಗದ ಸಂಸದರು ಇಷ್ಟು ಜನಪ್ರತಿನಿಧಿಗಳಿದ್ದುಕೊಂಡು ಭೀಮಸಮುದ್ರ ಕೆರೆಗೆ ನೀರು ತರಲು ಆಗುತ್ತಿಲ್ಲ. ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತ, ಕೊರೋನಾದಿಂದ ರೈತ ಕಂಗಾಲಾಗಿದ್ದಾನೆ. ಚಳ್ಳಕೆರೆ ತಾಲ್ಲೂಕು ಜಾಜೂರು ಗ್ರಾಮೀಣ ಬ್ಯಾಂಕ್‌ನವರು ರೈತ ಮಹಿಳೆ ರುಕ್ಮಿಣಿ ಮಾಡಿರುವ ಸಾಲಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ.
ಸಾಲ ಬಡ್ಡಿಗೆ ದುಡಿಯುವ ಎತ್ತುಗಳಂತೆ ಎಲ್ಲಾ ಬ್ಯಾಂಕ್‌ನವರು ರೈತರನ್ನು ನಿರ್ಲಕ್ಷೆಯಿಂದ ಕಾಣುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೆ ಮಧ್ಯ ಪ್ರವೇಶಿಸಿ ಯಾವುದೇ ಕಾರಣಕ್ಕೂ ರೈತರ ಸಾಲಕ್ಕಾಗಿ ಜಪ್ತಿ ಮಾಡಬಾರದೆಂದು ಬ್ಯಾಂಕ್ ಮ್ಯಾನೇಜರ್‌ಗಳಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಫ್ಲೆಕ್ಸ್, ಬ್ಯಾನರ್, ಕಟೌಟ್‌ಗಳಲ್ಲಿ ಮಿಂಚುವ ಬದಲು ಕೆರೆಗಳಿಗೆ ನೀರು ತುಂಬಿಸಿ ರೈತರ ಬದುಕನ್ನು ಹಸನುಗೊಳಿಸಲಿ. ಅವರ ಭಾಷಣ ನಮಗೆ ಬೇಕಿಲ್ಲ. ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಭದ್ರಾಮಲ್ದಂಡೆ ಬೇಕು ಎಂದು ಎಂದಾದರೂ ಹೋರಾಟ ಮಾಡಿದ್ದಾರಾ? ಬರೀ ಪ್ರಚಾರದಲ್ಲೆ ಮುಳುಗುವುದಾದರೆ ಏನು ಪ್ರಯೋಜನ. ನಮಗೆ ನೀರು ಬೇಕು. ಪುಕ್ಕಟೆ ಭಾಷಣವಲ್ಲ. ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ ವಹಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಗ್ರಾಮದೊಳಗೆ ಬಿಟ್ಟುಕೊಳ್ಳುವುದಿಲ್ಲ. ಸರಿಯಾದ ಪಾಠ ಕಲಿಸುತ್ತೇವೆಂದು ಎಚ್ಚರಿಸಿದರು.
ಬೆಳೆ ಪರಿಹಾರ ಹಣವೂ ರೈತರಿಗೆ ತಲುಪುತ್ತಿಲ್ಲ. ವಿಚಾರಿಸಿದರೆ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾರೆ. ವಿಮಾ ಕಂಪನಿಯವರಿಗೂ, ಬ್ಯಾಂಕಿನವರಿಗೂ ತಾಳ ಮೇಳವೇ ಇಲ್ಲದಂತಾಗಿದೆ. ಕಂಗೆಟ್ಟಿರುವ ರೈತ ಯಾರನ್ನು ಕೇಳಬೇಕು ಎನ್ನವುದೇ ತಿಳಿಯದಂತಾಗಿದೆ ಎಂದು ಸೋಮಗುದ್ದು ರಂಗಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಲ್.ಬಸವರಾಜಪ್ಪ ಅಳಗವಾಡಿ, ಗೌರವಾಧ್ಯಕ್ಷ ಜೆ.ಮೇಘರಾಜ್ ಹಳಿಯೂರು, ಕುರುಬರಹಳ್ಳಿ ಜಿ.ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ ಹಳಿಯೂರು, ನ್ಯಾಯವಾದಿ ಹಾಗೂ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಗಿರೀಶ್‌ರೆಡ್ಡಿ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ, ಕುಬೇಂದ್ರನಾಯ್ಕ, ಜಾನುಕೊಂಡ ಗುರುಸಿದ್ದಪ್ಪ, ಈರಣ್ಣ ಹೊಸಹಳ್ಳಿ, ಎಸ್.ಎಂ.ಶಿವಕುಮಾರ್, ವೆಂಕಟರಮಣಪ್ಪ, ಎನ್.ಜಿ.ಷಣ್ಮುಖಪ್ಪ, ಮರುಳಸಿದ್ದಪ್ಪ ಹೆಗ್ಗೆರೆ, ಜಿ.ಪರಮೇಶ್ವರಪ್ಪ, ಗೌಡ್ರು ಪರಮಶಿವಣ್ಣ ಸಭೆಯಲ್ಲಿ ಹಾಜರಿದ್ದರು.