ಸುದ್ದಿಒನ್, ಕುರುಗೋಡು : ಬೆಳೆ ನಷ್ಟಗೊಂಡು ಸಾಲ ತೀರಿಸಲು ಆಗದೆ ರೈತ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ರಾತ್ರಿ ದಮ್ಮೂರು ಗ್ರಾಮದಲ್ಲಿ ಜರುಗಿದೆ.
ಸಮೀಪದ ದಮ್ಮೂರು ಗ್ರಾಮದ ರೈತ ಮಹಾಂತೇಶ್ (35) ವರ್ಷ ಮೃತ ದುರ್ದೈವಿ ಗುರುವಾರ ರಾತ್ರಿ ಕುಟುಂಬಸ್ಥರು ಗೌರಮ್ಮಗೆ ಆರತಿ ಬೆಳಗಿಕೊಂಡು ಬರಲು ಹೋದ ಸಂದರ್ಭದಲ್ಲಿ ಮನೆಯಲ್ಲಿ ಇರುವ ಪ್ಯಾನ್ ಗೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದಾನೆ.
ಮೃತ ಮಹಾಂತೇಶ್ ಗೆ ಪತ್ನಿ ಸೇರಿ ಮೂರು ಹೆಣ್ಣು ಮಕ್ಕಳು ಮತ್ತು ಒಬ್ಬ ಪುತ್ರ ನಿದ್ದಾನೆ.
ರೈತ ಮಹಾಂತೇಶ್ ತಮ್ಮ ತಾಯಿ ಹೆಸರಿನಲ್ಲಿ ಇರುವ 3 ಎಕರೆ ಹಾಗೂ ತಮ್ಮನ 1.50 ಎಕರೆ ಮತ್ತು ಹೆಂಡತಿಯ 1 ಎಕರೆ ಭೂಮಿಯಲ್ಲಿ ಮೆಣಿಸಿನ ಕಾಯಿ ಬೆಳೆ ಬಿತ್ತನೆ ಮಾಡಿದ್ದು, ಮಳೆ ಇಲ್ಲದೆ ಹಾಗೂ ಬೆಳೆಗೆ ನೀರು ಸಿಗದ ಪರಿಣಾಮ ಬೆಳೆಗಳು ನಷ್ಟಗೊಂಡಿದ್ದರಿಂದ ಬೆಳೆಗೆ ವ್ಯಯಿಸಿದ ಸಾಲ ತೀರಿಸಲು ಆಗದೆ ಮನನೊಂದು ನೇಣು ಬಿಗಿದುಕೊಂಡಿದ್ದಾನೆ. ಬೆಳೆಗೆ ಅಂತ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತಾಯಿ ಹೆಸರಲ್ಲಿ 1.50 ಲಕ್ಷ ತಮ್ಮನ ಹೆಸರಲ್ಲಿ 70 ಸಾವಿರ ಕೈ ಸಾಲ 10 ಲಕ್ಷ ಮಾಡಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತ ರೈತನ ಮನೆಗೆ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಹಾಗೂ ಶಾಸಕ ಗಣೇಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ನೀಡಿ ಸರಕಾರದಿಂದ ದೊರಿಯುವ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ಕುರಿತು ತಾಯಿ ಶಂಕ್ರಮ್ಮ ನೀಡಿದ ದೂರಿನ ಮೇರೆಗೆ ಕುರುಗೋಡು ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.