ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 23 : ಬೆಳೆ ನಷ್ಟದ ವಾಸ್ತವ ಪರಿಸ್ಥಿತಿ ಗಮನಿಸದೆ, ಹಿಂದಿನ ಏಳು ವರ್ಷಗಳ ಇಳುವರಿ ಪ್ರಮಾಣಕ್ಕೆ ತಾಳೆ ಮಾಡುವುದು ಸರಿಯಲ್ಲ. ಪ್ರಾಕೃತಿಕವಾಗಿ ಮಳೆಯ ವೈಪರೀತ್ಯಗಳಿಂದ ಉಂಟಾಗುವ ನಷ್ಟಕ್ಕೆ ಪರಿಹಾರ ನೀಡಬೇಕು. ಬೆಳೆ ವಿಮೆ ನಿಯಮಗಳ ಬಗ್ಗೆ ನಮಗೂ ಅಸಮಾಧಾನ ಇದೆ ಎಂದು ತರಳಬಾಳು ಬೃಹನ್ಮಠದ ಪಿಠಾಧ್ಯಕ್ಷರಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನಲ್ಲಿ ಮಳೆ ಕೊರತೆಯಿಂದ ಮುಂಗಾರಿನ ಶೇಂಗಾ, ತೊಗರಿ ಬೆಳೆ ನಷ್ಟವಾಗಿರ ರೈತರಿಗೆ ಮಧ್ಯಂತರ ವಿಮೆ ಮತ್ತು ಬೆಳೆ ಪರಿಹಾರ ನೀಡುತ್ತಿಲ್ಲ ಎಂದು ತಾಲೂಕಿನ ತೊಗರಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಶ್ರೀಗಳಿಗೆ ಮನವಿ
(ದೂರು) ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿರುವ ಅವರು ಪರಿಹಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಡಾ.ಸಿ. ಶಿವಲಿಂಗಪ್ಪ ಮಾತನಾಡಿ, ಮುಂಗಾರು ಮಳೆ ಆರಂಭದಲ್ಲೇ ಕೊರತೆ ಆಗಿತ್ತು. ಮತ್ತೆ ಬಿತ್ತನೆ ಸಮಯಕ್ಕೆ ಬಂದ ಸ್ವಲ್ಪ ಮಳೆಗೆ ಶೇಂಗಾ, ತೊಗರಿ ಮತ್ತು ಇತರೆ ಬೆಳೆ ಬಿತ್ತನೆ ಮಾಡಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಸಂಪೂರ್ಣ ನಾಲ್ಕು ವಾರ ಮಳೆ ಬರಲಿಲ್ಲ.ಇದರಿಂದ ಬೆಳೆ ಇಳುವರಿ ಹಂತದಲ್ಲಿ ಸತ್ವ ಕಳೆದುಕೊಂಡು ರೈರಿಗೆ ಬೆಳೆ ಸಿಗಲಲ್ಲ. ಜಾನುವಾರುಗಳಿಗೆ ಮೇವೂ ಆಗಲಿಲ್ಲ. ಮಧ್ಯಂತರ ವಿಮೆ ಬಿಡುಗಡೆ ಮಾಡುತ್ತೇವೆ ಎಂದ ಸರ್ಕಾರ ಇದುವರೆಗೂ ರೈತರಿಗೆ ಕೊಟ್ಟಿಲ್ಲ. ತೊಗರಿ ಬೆಳೆಗೂ ವಿಮೆ ಕೊಡಲು ಮೀನಾಮೇಶ ಮಾಡಲಾಗುತ್ತಿದೆ. ಸಾಕಷ್ಟು ಪ್ರತಿಭಟನೆ ಮಾಡಿದ್ದೇವೆ. ಈ ತಿಂಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎನ್ನುತ್ತಾರೆ. ಹೇಳಿದಂತೆ ನಡೆದುಕೊಳ್ಳುತ್ತಿಲ್ಲ. ಅಧಿಕಾರಿ ವರ್ಗ ಮತ್ತು ವಿಮಾ ಕಂಪನಿಯಿಂದಲೂ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಸ್ವಾಮೀಜಿ ನ್ಯಾಯ ಸನ್ನಿಧಾನದಲ್ಲಿ ಸಮಸ್ಯೆ ಹೇಳಿಕೊಂಡಿದ್ದಾರೆ.
ರೈತ ಸಂಘದ ಆರ್. ಎ. ದಯಾನಂದ ಮೂರ್ತಿ, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಇದ್ದರು.






