ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ,ಡಿ.26: ಮುಂಗಾರು ಮಳೆ ಹೆಚ್ಚಾಗಿ ಹಾಳಾಗಿರುವ ಈರುಳ್ಳಿ ಬೆಳೆ ಹಾಗೂ ಇಲಾಖೆ ವತಿಯಿಂದ ವಿತರಣೆ ಮಾಡಿರುವ ಕಳಪೆ ತೊಗರಿ ಬೀಜ ವಿತರಣೆಯಿಂದಾಗಿ ಹಾಳಾಗಿದ್ದು ಬೆಳೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದವರು ಆಗ್ರಹಿಸಿದರು.
ಚಿತ್ರದುರ್ಗ ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತ ಸಂಘದ ಪದಾಧಿಕಾರಿಗಳು ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಉತ್ತಮ ಹಾಗೂ ಗುಣಮಟ್ಟದ ಬೀಜಗಳು ದೊರೆಯುತ್ತವೆ ಎಂದು ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಎಲ್ಲಾ ತರಹದ ಬೀಜಗಳನ್ನು ಖರೀದಿ ಮಾಡಿದ್ದಾರೆ. ಆದರೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೀಜವು ಸುಮಾರು 6-7 ತಿಂಗಳಾದರು ಹೂವು ಕಾಯಿ ಕಟ್ಟಿರುವುದಿಲ್ಲ, ರೈತರು 1 ಎಕರೆಗೆ ಸುಮಾರು 35-40 ಸಾವಿರ ಹಣ ಖರ್ಚು ಮಾಡಿ, ಹಣ ಕಳೆದ ಕೊಂಡಿರುತ್ತಾರೆ ಆದ್ದರಿಂದ ಸಂಬಂಧಪಟ್ಟ ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಈರುಳ್ಳಿ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಸುಮಾರು 4 ವರ್ಷದಿಂದಲೂ ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. 2024ರ ಮುಂಗಾರು ಮಳೆಯು ಹೆಚ್ಚು ಬಂದಿದ್ದು, ಈರುಳ್ಳಿ ಬೆಳೆಯು ಜಮೀನಿನಲ್ಲಿ ಕೊಳೆತು ಹೋಗಿದೆ. ಜಿಲ್ಲಾ ಪಂಚಾಯತ್ ಸಿಇಓ ರೈತರ ಜಮೀನಿಗೆ ಭೇಟಿ ಮಾಡಿ ಈರುಳ್ಳಿ ನಷ್ಟವಾಗಿರುವುದನ್ನು ವೀಕ್ಷಿಸಿದರು. ಇದುವರೆಗೂ ರೈತರಿಗೆ ಕೆಲವೊಂದು ಪಂಚಾಯಿತಿಗೆ ಮಾತ್ರ ಪರಿಹಾರ ಹಣವನ್ನು ಹಾಕಿದ್ದು, ಅತಿ ಹೆಚ್ಚು ಈರುಳ್ಳಿ ಬೆಳೆಯುವಂತಹ ಪಂಚಾಯಿತಿಗಳಿಗೆ ಪರಿಹಾರವನ್ನು ಹಾಕದೆ ತಾರತಮ್ಯ ಮಾಡಲಾಗಿದೆ. ಆದ್ದರಿಂದ ಕೂಡಲೇ ಎಲ್ಲಾ ರೈತರಿಗೂ ಪರಿಹಾರ ಹಣವನ್ನು ನೀಡಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಅಕ್ರಮ ಸಕ್ರಮವನ್ನು ಸರ್ಕಾರ 2023ರಲ್ಲಿ ರದ್ದು ಮಾಡಿದೆ ಇದರಿಂದ ರೈತರಿಗೆ ತುಂಬಾ ಅನಾನುಕೂಲವಾಗುತ್ತಿದೆ, ರೈತರು ವಿದ್ಯುತ್ ಸಂಪರ್ಕ ಪಡಯಬೇಕಾದರೆ 3-4 ಲಕ್ಷ ರೂಗಳನ್ನು ರೈತ ಖರ್ಚು ಮಾಡಬೇಕಿದೆ ಈ ಹಿನ್ನಲೆಯಲ್ಲಿ ಸರ್ಕಾರ ಈ ಕೂಡಲೇ ಅಕ್ರಮ-ಸಕ್ರಮವನ್ನು ಮರು ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಧನಂಜಯ, ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಭೂತಯ್ಯ, ಇಸ್ಸಮುದ್ರ ಪ್ರಭು ಮಲ್ಲಾಪುರ ತಿಪ್ಪೇಸ್ವಾಮಿ, ಹಿರಿಯೂರು ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಯುವ ಅಧ್ಯಕ್ಷ ಚೇತನ ಯಳನಾಡು, ತಿಪ್ಪೇಸ್ವಾಮಿ ಕೆರೆನಹಳ್ಳಿ, ಗೌಸ್ ಪೀರ್, ಸುರೇಶ್, ಶಿವರಾಜು, ಅಪ್ಪು, ಅಮರೇಶ್, ಅಜ್ಜಣ್ಣ, ಲಕ್ಷ್ಮೀಕಾಂತ್, ರೇವಣ್ಣ, ಸೇರಿದಂತೆ ಇತರರು ಭಾಗವಹಿಸಿದ್ದರು.