ಗ್ರಾಹಕರಿಗೆ ಪರಿಹಾರ ನೀಡದವರ ವಿರುದ್ದ  ಕ್ರಿಮಿನಲ್ ಕೇಸ್ : ಹೆಚ್.ಎನ್.ಮೀನಾ ಹೇಳಿಕೆ

2 Min Read

 

ಚಿತ್ರದುರ್ಗ. ಜ.05: ಗ್ರಾಹಕರ ಆಯೋಗ ನೀಡಿದ ಆದೇಶದಂತೆ ಸೇವಾದಾರರು ಗ್ರಾಹಕರಿಗೆ ಪರಿಹಾರ ನೀಡದೇ ಇದ್ದರೆ, ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು  ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಹೆಚ್.ಎನ್. ಮೀನಾ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಬಳ್ಳೇಕಟ್ಟೆಯ ಕುಂಬಾರ ಗುಂಡಯ್ಯ ಮಹಾಸಂಸ್ಥಾನದಲ್ಲಿ ಶುಕ್ರವಾರ
ಆಹಾರ ನಾಗರಿಕ  ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನಾಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾದ ವತಿಯಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ತ್ರೀ-ಶಕ್ತಿ, ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಗ್ರಾಹಕರ ಸಮಸ್ಯೆ ಮತ್ತು ಹಕ್ಕುಗಳ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರ ಆಯೋಗ ನೀಡಿದ ಆದೇಶವನ್ನು ಸೇವಾದಾರರು ಪಾಲಿಸಬೇಕಾಗುತ್ತದೆ. ಪರಿಹಾರ ನೀಡಲು ವಿಫಲವಾದರೆ ಕ್ರಿಮಿನಲ್ ಕೇಸು ದಾಖಲಿಸುವುದರೊಂದಿಗೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದರು.

1962 ರಲ್ಲಿ ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರು ಗ್ರಾಹಕರ ಹಿತರಕ್ಷಣಾ ಕಾಯ್ದೆಯನ್ನು ಅಮೇರಿಕಾದಲ್ಲಿ ಮೊದಲ ಬಾರಿಗೆ ಜಾರಿಗೆ ತಂದರು. ಭಾರತದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸರ್ಕಾರ 1986ರಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿತು. ಇದರ ಮುಖ್ಯ ಉದ್ದೇಶ ಗ್ರಾಹಕರನ್ನು ವಂಚನೆ ಹಾಗೂ ಶೋಷಣೆಯಿಂದ ತಪ್ಪಿಸುವುದಾಗಿದೆ. ಗ್ರಾಹಕರು‌ ರೂ.50 ಲಕ್ಷದ ವರೆಗಿನ ವಂಚನೆ ಹಾಗೂ ಸೇವಾ ನೂನ್ಯತೆ ಪ್ರಕರಣಗಳಿಗೆ ಜಿಲ್ಲಾ ಗ್ರಾಹಕರ ಆಯೋಗ, ರೂ.50 ಲಕ್ಷದಿಂದ ರೂ.2 ಕೋಟಿ ವರೆಗೆ ರಾಜ್ಯ ಗ್ರಾಹಕರ ಆಯೋಗ ಹಾಗೂ ರೂ.2 ಕೋಟಿಯಿಂದ 10 ಕೋಟಿ ವರೆಗೆ ರಾಷ್ಟ್ರೀಯ ಗ್ರಾಹಕರ ಆಯೋಗದಲ್ಲಿ ಪ್ರಕರಣ ದಾಖಲಿಸಿ ನ್ಯಾಯ ಪಡೆದುಕೊಳ್ಳಬಹುದು. ಪ್ರಕರಣದ ದಾಖಲಿಸಿ‌ 3 ತಿಂಗಳ ಒಳಗಾಗಿ ಆಯೋಗ ಪ್ರಕರಣವನ್ನು ಇತ್ಯರ್ಥ ಪಡಿಸಲಾಗುವುದು ಎಂದರು.

ಗ್ರಾಹಕರು ಸ್ವತಃ ಅಥವಾ ವಕೀಲರ ಮೂಲಕ ನೇರವಾಗಿ ಆಯೋಗದಲ್ಲಿ ಪ್ರಕರಣ ದಾಖಲಿಸಬಹುದು. ಇಲ್ಲವಾದರೆ ಆನ್ ಲೈನ್ ಮೂಲಕವು ಪ್ರಕರಣ ದಾಖಲಿಸಬಹುದು. ಗ್ರಾಹಕರ ಹಿತರಕ್ಷಣಾ ಕಾಯ್ದೆಗೆ ಕಾಲ ಕಾಲಕ್ಕೆ ತಿದ್ದುಪಡಿ ತಂದು ಕಾಯ್ದೆಯನ್ನು ಬಲ ಪಡಿಸಲಾಗಿದೆ. ಗ್ರಾಹಕರು ಬ್ಯಾಂಕ್, ವಿಮೆ,ಆರೋಗ್ಯ,ಸಾರಿಗೆ ಸೇರಿದಂತೆ ಎಲ್ಲಾ ರೀತಿಯ ಸೇವೆಗಳಲ್ಲಿ ನ್ಯೂನತೆಗಳಿಗೆ ಸಂಬಂಧಿಸಿದಂತೆ ಆಯೋಗದಲ್ಲಿ ಪ್ರಕರಣ ದಾಖಲಿಸಬಹುದು ಎಂದು ಅಧ್ಯಕ್ಷೆ ಹೆಚ್.ಎನ್. ಮೀನಾ ಹೇಳಿದರು.

ಕಾರ್ಯಕ್ರಮದಲ್ಲಿ ತೆಲಸಂಗ ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಬಸವ ಕುಂಬಾರ ಗುಂಡಯ್ಯ ಸ್ವಾಮಿಗಳು, ಚಿತ್ರದುರ್ಗ ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಬಸವಮೂರ್ತಿ ಕುಂಬಾರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯೆ ಬಿ.ಹೆಚ್.ಯಶೋಧ, ಆಹಾರ ನಿರೀಕ್ಷಕಿ ಉಮಾದೇವಿ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ ಅಧ್ಯಕ್ಷೆ ಎಸ್. ಬೈಲಮ್ಮ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಜಿಲ್ಲಾ ಸಂಯೋಜಕ ತಮಟಕಲ್ಲು ಬಿ. ಹನುಮಂತಪ್ಪ, ಕುಂಬಾರ ಗಂಡಯ್ಯ ಮಹಾಸಂಸ್ಥಾನದ ಮಾಜಿ ಕಾರ್ಯದರ್ಶಿ ಮೃತ್ಯುಂಜಯ ಸೇರಿದಂತೆ ಮತ್ತಿರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks