ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್,ಚಿತ್ರದುರ್ಗ ಜ.09 : ಚಿತ್ರದುರ್ಗ ಜಿಲ್ಲೆ ಶಾಶ್ವತ ಬರ ಪೀಡಿತ ಪ್ರದೇಶವಾಗಿದ್ದು, ರೈತಾಪಿ ಸಮುದಾಯ ಪ್ರತಿ ವರ್ಷ ನಷ್ಟ ಅನುಭವಿಸುತ್ತಿದ್ದಾರೆ. ಹವಾಮಾನ ವೈಪರಿತ್ಯಗಳು ರೈತರ ಬದುಕಿನ ಮೇಲೆ ಹೆಚ್ಚು ಪರಿಣಾಮ ಬರುತ್ತವೆ ಬೆಳೆ ಹಾನಿ ಪರಿಶೀಲನೆ ಹಾಗೂ ನಷ್ಟ ಅಂದಾಜಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಶಾಶ್ವತ ಕೋಶವೊಂದನ್ನು ರಚಿಸುವ ತುರ್ತು ಅಗತ್ಯವಿದೆ ಎಂದು ಸರ್ಕಾರವನ್ನು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಗುರುವಾರ ಪ್ರತಿಭಟನೆಯನ್ನು ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ ಶಾಶ್ವತ ಬರ ಪೀಡಿತ ಪ್ರದೇಶವಾಗಿದ್ದು ರೈತಾಪಿ ಸಮುದಾಯ ಪ್ರತಿ ವರ್ಷ ನಷ್ಟ ಅನುಭವಿಸುತ್ತಿದ್ದಾರೆ. ಒಮ್ಮೆ ಅತಿವೃಷ್ಟಿ ಮತ್ತೊಮ್ಮೆ ಅನಾವೃಷ್ಟಿ ಇಲ್ಲಿ ಮಾಮೂಲು, ಹವಾಮಾನ ವೈಪರಿತ್ಯಗಳು ರೈತರ ಬದುಕಿನ ಮೇಲೆ ಹೆಚ್ಚು ಪರಿಣಾಮ ಬರುತ್ತವೆ. ಹಾಗಾಗಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಶ್ವತ ವೇದಿಕೆ ಒದಗಿಸುವುದು ಅನಿವಾರ್ಯ ಬೆಳೆ ಹಾನಿ ಪರಿಶೀಲನೆ ಹಾಗೂ ನಷ್ಟ ಅಂದಾಜಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಶಾಶ್ವತ ಕೋಶವೊಂದನ್ನು ರಚಿಸುವ ತುರ್ತು ಅಗತ್ಯವಿದೆ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕೋಶದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ. ವಿಮಾ ಕಂಪನಿ ಅಧಿಕಾರಿಗಳು ಇರಬೇಕು. ಇದಕ್ಕಾಗಿ ಪ್ರತ್ಯೇಕ ಕಚೇರಿ ತೆರೆದು ಮುಂಗಾರು ಹಿಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿ ಆದಾಗ ಕೋಶವು ಕಾರ್ಯ ಪಡೆ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ರೈತರಿಂದ ಬಂದ ದೂರುಗಳ ಆಲಿಸಿ ತಕ್ಷಣ ಫೀಲ್ಡ್ ಗೆ ಹೋಗಬೇಕು. ಅಲ್ಲದೇ ತಮ್ಮದೇ ಆದ ನೆಟ್‍ವರ್ಕ್ ಮೂಲಕ ಬೆಳೆ ನಷ್ಟ ಅಂದಾಜಿಸುವ ಪರಿಪಾಟಲು ಇರಬೇಕು. ಸಹಾಯ ವಾಣಿ ಕಾರ್ಯನಿರ್ವಹಸಬೇಕು ಎಂದು ಒತ್ತಾಯಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷ ಮಳೆ ಜಾಸ್ತಿಯಾಗಿ ಈರುಳ್ಳಿ ಕೊಳೆತು ಹೋಗಿದೆ. ಈರುಳ್ಳಿ ಬೆಳೆ ನಾಶವನ್ನು ಖುದ್ದು ಪರಿಶೀಲಿಸಲು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆಗಮಿಸಿದ್ದರು. ಅಲ್ಲದೇ ಕಳಪೆ ಬಿತ್ತನೆ ಬೀಜ ವಿತರಣೆಯಿಂದಾಗಿ ಸಾವಿರಾರು ಎಕರೆಯಲ್ಲಿ ಬಿತ್ತನೆ ಮಾಡಲಾದ ತೊಗರಿ ಹೂ ಬಿಟ್ಟು ಕಾಯಿ ಕಟ್ಟದೆ ಹಾಗೆ. ಉಳಿದಿದೆ. ಪರಿಣಾಮ ರೈತ ನಷ್ಟ ಅನುಭವಿಸುವಂತಾಗಿದೆ. ಬೆಳೆ ನಷ್ಟ ಪರಿಹಾರ ವಿತರಣೆ ಸಂಬಂಧ ರೈತ ಸಂಘಟನೆಗಳು ಈಗಾಗಲೇ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಪರಿಹಾರ ವಿತರಣೆಯಲ್ಲಿನ ತಾಂತ್ರಿಕ ಲೋಪ ಹಾಗೂ ತಪ್ಪು ನಡೆಯಿಂದಾಗಿ ಬಹಳಷ್ಟು ರೈತರಿಗೆ ಪರಿಹಾರ ವಿತರಣೆಯಾಗಿಲ್ಲ. ರೈತರು ನಿತ್ಯ ಬ್ಯಾಂಕ್ ಖಾತೆ ಪರಿಶೀಲಿಸಿ ಸುಸ್ತಾಗಿದ್ದಾರೆ. ಅಧಿಕಾರಿಗಳ ಮಟ್ಟದಲ್ಲಿ ಆದ ಲೋಪದಿಂದಾಗಿ ಪರಿಹಾರ ವಿತರಣೆಯಾಗಿಲ್ಲ. ಜಿಲ್ಲಾಡಳಿತ ತಕ್ಷಣವೇ ಬೆಳೆ ನಷ್ಟದ ಬಗ್ಗೆ ಪುನರ್ ಪರಿಶೀಲಿಸಿ ತಕ್ಷಣವೇ ಪರಿಹಾರ ವಿತರಿಸಬೇಕು. ಯಾರೊಬ್ಬ ರೈತರೂ ಬೆಳೆ ನಷ್ಟ ಪರಿಹಾರ ವ್ಯಾಪ್ತಿಯು ಹೊರಗಿರದಂತೆ ನೋಡಿಕೊಳ್ಳಬೇಕು. ಬೆಸ್ಕಾಂನವರು ನಿತ್ಯ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿ ಕೆಲವು ಕಡೆ ಆರು ತಾಸ ವಿತರಿಸುತ್ತಿದ್ದಾರೆ. ಇದರಿಂದಾಗಿ ಬೇಸಿಗೆ ಫಸಲು ಬೆಳೆಯಲು ತೊಂದರೆಯಾಗಿದೆ. ತಕ್ಷಣವೇ ಏಳು ತಾಸು ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣದಿಂದ ಪಂಪ್ ಸೆಟ್ಟುಗಳಿಗೆ ಮೀಟರ್ ಅಳವಡಿಸ ಬಾರದು. ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದ್ದು, ಕೂಡಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತೋಟಗಾರಿಕೆ ಇಲಾಖೆ, ವಿಮಾ ಕಂಪನಿ ಬೆಸ್ಕಾಂ ಇಲಾಖೆಯ ಅಧಿಕಾರಿ ಗಳೊಂದಿಗೆ ಸಭೆ ಕರೆಯಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಹೊರಕೇರಪ್ಪ, ಜಿಲ್ಲಾಧ್ಯಕ್ಷ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಿರಿಯೂರು ತಾಲ್ಲೂಕು ಅಧ್ಯಕ್ಷ ಶಿವಕುಮಾರ್, ಯುವ ತಾಲ್ಲೂಕು ಅಧ್ಯಕ್ಷ ಚೇತನ ಯಳನಾಡು, ಉಪಾಧ್ಯಕ್ಷ ಲಕ್ಷ್ಮೀಕಾಂತ ಭೂತಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.