ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಜ.01): ಹದಿನೈದರಿಂದ ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ಜ.3 ರಿಂದ ಕೋವಿಡ್ ಲಸಿಕೆ ನೀಡಲಾಗುತ್ತದೆ. ಎಲ್ಲಾ ಇಲಾಖೆಯವರು ಸಹಕರಿಸಿ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಮನವಿ ಮಾಡಿದರು.
ಕೋವಿಡ್ ಲಸಿಕೆ ನೀಡಿಕೆ ಸಂಬಂಧ ತಾಲ್ಲೂಕು ಕಚೇರಿಯಲ್ಲಿ ಶನಿವಾರ ನಡೆದ ತಾಲ್ಲೂಕು ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕಿನಾದ್ಯಂತ 24084 ಮಕ್ಕಳಿಗೆ ಲಸಿಕೆ ನೀಡುವ ಗುರಿಯಿದ್ದು, ಗ್ರಾಮ ಪಂಚಾಯಿತಿ ಪಿ.ಡಿ.ಓ.ಗಳು ಹಾಗೂ ಎಲ್ಲಾ ಇಲಾಖೆಯ ಸಿಬ್ಬಂದಿಯವರು ಕೈಜೋಡಿಸಬೇಕು ಎಂದು ಸೂಚಿಸಿದ ತಹಶೀಲ್ದಾರ್ ಇಲ್ಲಿಯವರೆಗೂ ಕೋವಿಡ್ ಒಂದು ಮತ್ತು ಎರಡನೆ ಅಲೆಯಲ್ಲಿ ಯಾವ ರೀತಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಯಿತೋ ಅದೇ ರೀತಿ ಇನ್ನು ಮುಂದೆಯೂ ಸಾರ್ವಜನಿಕರು ಜಾಗೃತರಾಗಿರುವಂತೆ ತಿಳಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಗಿರೀಶ್ ಮಾತನಾಡಿ ಚಿತ್ರದುರ್ಗ ತಾಲ್ಲೂಕಿನಾದ್ಯಂತ 73 ಲಸಿಕಾ ತಂಡ, 42 ಮೇಲ್ವಿಚಾರಕರ ತಂಡ ರಚಿಸಲಾಗಿದ್ದು, ಜ.10 ರಿಂದ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಹಿರಿಯ ನಾಗರೀಕರಿಗೆ ಶಕ್ತಿ ವರ್ಧಕ ಲಸಿಕೆ ನೀಡಲಾಗುವುದು. ಜ.23 ರಿಂದ 26 ರವರೆಗೆ ಪಲ್ಸ್ ಪೊಲಿಯೋ ಕೂಡ ಮಕ್ಕಳಿಗೆ ನೀಡಲಾಗುವುದು. ಒಂದು ಮತ್ತು ಎರಡನೆ ಡೋಸ್ ಕೊರೋನಾ ಲಸಿಕೆ ಪಡೆದ 60 ವರ್ಷ ಮೇಲ್ಪಟ್ಟವರಿಗೆ ದೇಹದಲ್ಲಿ ಶಕ್ತಿ ವೃದ್ದಿಸಲಿಕ್ಕಾಗಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ಎನ್.ಮಂಜುನಾಥ್ ಮಾತನಾಡಿ ಜ.3 ರಿಂದ 8 ರವರೆಗೆ ತಾಲ್ಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಲಸಿಕೆ ಅಧಿವೇಶನ ನಡೆಯಲಿದ್ದು, ಕೋವಿಡ್ ಜೊತೆಯಲ್ಲಿಯೇ ನಾವು ನೀವುಗಳೆಲ್ಲರೂ ವಾಸಿಸಬೇಕಿರುವುದರಿಂದ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಿರಿಯ ನಾಗರೀಕರಿಗೆ ಶಕ್ತಿ ವರ್ಧಕ ಲಸಿಕೆಯನ್ನು ನೀಡಲಾಗುವುದು. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡು ಕೊರೋನಾದಿಂದ ದೂರವಿರುವಂತೆ ವಿನಂತಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ ಮಾತನಾಡಿ ಹದಿನೈದರಿಂದ ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುತ್ತಿರುವುದರಿಂದ ಎಲ್ಲಾ ಶಾಲೆಗಳಲ್ಲಿ ಕೊಠಡಿಗಳನ್ನು ಸಿದ್ದಪಡಿಸಿಟ್ಟುಕೊಳ್ಳುವಂತೆ ಶಿಕ್ಷಕರುಗಳಿಗೆ ಸೂಚಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಆರ್.ಬಿ.ಎಸ್.ಕೆ.ತಂಡದ ಡಾ.ಮಹೇಂದ್ರ, ಡಾ.ವಾಣಿ, ಡಾ.ಮಂಜುಳ, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಪರ್ವಿನ್, ತಾಲ್ಲೂಕು ಕಚೇರಿಯ ಕಂದಾಯ ನಿರೀಕ್ಷಕ ಶರಣಪ್ಪ, ನವೀನ್, ಭರಮಸಾಗರ ಸಿ.ಡಿ.ಪಿ.ಓ.ನರಸಿಂಹರಾಜು ಇನ್ನು ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.