ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ.ಡಿ.31: ಸರ್ಕಾರದ ಆದೇಶದಂತೆ ಡಿಸೆಂಬರ್ 29 ರಿಂದ ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕಾ ಕೇಂದ್ರಗಳನ್ನು ಪುನಃ ಪ್ರಾರಂಭಿಸಲಾಗಿದ್ದು, ಜಿಲ್ಲೆಯಲ್ಲಿ ಪ್ರಸ್ತುತ 34120 ಡೋಸ್ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿರುತ್ತದೆ.
ಕೋವಿಶಿಲ್ಡ್ ಲಸಿಕೆ ದಾಸ್ತಾನು ಪಡೆಯಲು ರಾಜ್ಯ ಮಟ್ಟಕ್ಕೆ ಬೇಡಿಕೆ ಸಲ್ಲಿಸಿದ್ದು, ಕೋವಿಶಿಲ್ಡ್ ಲಸಿಕೆ ಸರಬರಾಜು ಆದ ನಂತರ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗ ನಗರದ ಸ್ಟೇಡಿಯಂ ಹತ್ತಿರದ ಬುದ್ಧನಗರ ಆರೋಗ್ಯ ಕೇಂದ್ರ, ಗೋಪಾಲಪುರ ರಸ್ತೆಯ ಮಾರುತಿ ನಗರ ಆರೋಗ್ಯ ಕೇಂದ್ರ, ಹೊಳಲ್ಕೆರೆ ರಸ್ತೆಯ ನೆಹರು ನಗರ ಆರೋಗ್ಯ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಕೋವಿಡ್ ಮುನ್ನೆಚ್ಚರಿಕೆ ಡೋಸ್ (ಬೂಸ್ಟರ್ ಡೋಸ್) ಲಸಿಕೆ ನೀಡಲಾಗುತ್ತದೆ.
ಈ ಮೊದಲು ಕೋವ್ಯಾಕ್ಸಿನ್ ಮೊದಲ ಮತ್ತು ಎರಡನೇ ಡೋಸ್ ಪಡೆದವರು ಈಗ ಮೂರನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆಯುವುದು ಮತ್ತು ಈ ಮೊದಲು ಕೋವಿಶಿಲ್ಡ್ ಮೊದಲ ಮತ್ತು ಎರಡನೇ ಡೋಸ್ ಪಡೆದವರು ಈಗ ಮೂರನೇ ಡೋಸ್ ಲಸಿಕೆ ಪಡೆಯುವುದು. 18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರು ಈ ಮೊದಲು ಎರಡು ಡೋಸ್ ಪಡೆದವರು ಈಗ ಮೂರನೇ ಮುನ್ನೆಚ್ಚರಿಕೆ ಕೋವಿಡ್ ಲಸಿಕೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಕೋರಿದ್ದಾರೆ.