ಬೆಂಗಳೂರು: ಕೊರೊನಾದಿಂದಾಗಿ ಕಳೆದ ಎರಡು ವರ್ಷದಿಂದ ಅದ್ಧೂರಿಯಾಗಿ, ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದ ಯಾವ ಹಬ್ಬಗಳನ್ನು ಆಚರಿಸೋದಕ್ಕೆ ಆಗ್ತಾ ಇರ್ಲಿಲ್ಲ. ಇದೀಗ ಕೊರೊನಾ ದಿನದಿಂದ ದಿನಕ್ಕೆ ಕಡಿಮೆಯಾಗ್ತಾ ಇದೆ. ಎಲ್ಲವೂ ತಹಬದಿಗೆ ಬರ್ತಾ ಇದೆ. ಹೀಗಾಗಿ ಒಂದೊಂದೆ ಆಚರಣೆಗೆ ಅನುಮತಿ ಸಿಕ್ತಾ ಇದೆ.
ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆ ಅಂದ್ರೆ ಜೋರು. ಎಲ್ಲೆಲ್ಲಿಂದಲೂ ಜನ ಬರ್ತಾರೆ. ವಾರಗಟ್ಟಲೇ ನಡೆಯುವ ಜಾತ್ರೆಯಲ್ಲಿ ಓಡಾಡಿ ಖುಷಿ ಪಡ್ತಾರೆ. ಇದೀಗ ಎರಡು ವರ್ಷದಿಂದ ಕೇವಲ ದೇವಸ್ಥಾನಕ್ಕಷ್ಟೇ ಸೀಮಿತವಾಗಿದ್ದ ಕಡಲೇಕಾಯಿ ಪರಿಷೆಯನ್ನ ಸಾರ್ವಜನಿಕವಾಗಿ ಮಾಡಲು ಬಿಬಿಎಂಪಿ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಕೋವಿಡ್ ಸಂಖ್ಯೆ ತಗ್ಗಿರುವ ಕಾರಣ ಜಾತ್ರೆ, ಪರಿಷೆ ಮಾಡೋದಕ್ಕೆ ಅನುಮತಿ ನೀಡಲಾಗಿದೆ. ಜಾತ್ರೆಯ ರೂಪು ರೇಷೆಯ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿತಿಂದ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ಆ ಬಳಿಕ ಸ್ಥಳೀಯರ ಜೊತೆ ಚರ್ಚಿಸಿ ಜಾತ್ರೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಂಡು ಅಧಿಕಾರಿಗಳು ಅನುಮತಿ ನೀಡ್ತಾರೆ ಎಂದಿದ್ದಾರೆ.