ಬೆಂಗಳೂರು : ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಶಾಸಕ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರವಾಗಲಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಸಂಬಂಧ ತೀರ್ಪನ್ನ ಪ್ರಕಟ ಮಾಡಲಿದೆ. 2016ರಂದು ನಡೆದ ಘಟನೆಯಾಗಿತ್ತು. ಇಷ್ಟು ವರ್ಷಗಳ ಕಾಲ ವಿಚಾರಣೆ ನಡೆಸಿರುವ ಕೋರ್ಟ್ ನಾಳೆ ತೀರ್ಪು ಪ್ರಕಟ ಮಾಡಲಿದೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಕೂಡ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಕಳೆದ ಮಾರ್ಚ್ ಕೊನೆಯ ವಾರದಲ್ಲಿ ವಾದ, ಪ್ರತಿವಾದ ಆಲಿಸಿದ್ದ ನ್ಯಾಯಾಲಯ, ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಕೀಲರಿಗೆ ಹೆಚ್ಚುವರಿ ಲಿಖಿತ ವಾದ ಸಲ್ಲಿಕೆ ಮಾಡಲು ಅವಕಾಶ ನೀಡಿತ್ತು. ಅದರಂತೆ ಏಪ್ರಿಲ್ 2 ರಂದು ಎಲ್ಲರೂ ಲಿಖಿತ ವಾದ ಸಲ್ಲಿಸಿದ್ದರು. ಬಳಿಕ ಏಪ್ರಿಲ್ 9ಕ್ಕೆ ತೀರ್ಪು ಪ್ರಕಟ ಮಾಡುವುದಾಗಿ ಕೋರ್ಟ್ ಸೂಚನೆ ನೀಡಿತ್ತು.

ತೀರ್ಪು ಪ್ರಕಟಣೆಯ ದಿನ ಎಲ್ಲಾ 21 ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಅವರನ್ನ 2016ರ ಜೂನ್ 15ರಂದು ಅವರ ಮಾಲೀಕತ್ವದ ಜಿಮ್ ನಲ್ಲಿಯೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆ ಸಮಯದಲ್ಲಿ ಕುಲಕರ್ಣಿ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಆಗಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಸೆಪ್ಟೆಂಬರ್ 2019 ರಲ್ಲಿ, ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತು. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರ ಕೈವಾಡ ಇದೆ ಎಂದು ಆರೋಪಿಸಿ 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದ್ದರು.













