ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ,(ಮೇ.22) : 2023ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಮತದಾರರಿಗೆ ಹಣವನ್ನು ನೀಡುವುದರ ಮೂಲಕ ಗೆಲುವನ್ನು ಸಾಧಿಸಿದೆ. ಇದರ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿ, ಸಾಕ್ಷಿಯನ್ನು ನೀಡಿದರೂ ಸಹಾ ಇಲ್ಲಿಯವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು 2023ರ ಚಿತ್ರದುರ್ಗ ವಿಧಾನಸಭಾ ಚುನಾವಣಾ ಪಕ್ಷೇತರ ಅಭ್ಯರ್ಥಿ ಬೂತರಾಜ್ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೇ. 10ರಂದು ನಡೆದ ಚುನಾವಣೆಯಲ್ಲಿ ನಾನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ, ನನ್ನ ಪ್ರಚಾರ ಸಮಯದಲ್ಲಿ ಯಾರು ಸಹಾ ಹಣವನ್ನು ನೀಡಿ ಮತವನ್ನು ನೀಡುತ್ತೇವೆ ಎಂದು ಕೇಳಿಲ್ಲ, ಆದರೆ ಮೇ 9 ರಂದು ರಾಷ್ಟ್ರೀಯ ಪಕ್ಷಗಳು ತಮ್ಮ ಕಾರ್ಯಕರ್ತರ ಮೂಲಕ ಮತದಾರರಿಗೆ ಹಣವನ್ನು ಹಂಚುವುದರ ಮೂಲಕ ಮತವನ್ನು ಖರೀದಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಚುನಾವಣಾಧಿಕಾರಿಗಳಿಗೆ ದೂರಿನ ಮೂಲಕ ಸಾಕ್ಷಿಯಾಗಿ ನೀಡಿ, ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿತ್ತು.
ಮತದಾರರಿಗೆ ಯಾವುದೇ ರೀತಿ ಅಸೆ ಆಮಿಷವನ್ನು ಒಡ್ಡಬಾರದೆಂದು ಕಾನೂನು ಇದೆ. ಆದರೂ ಸಹಾ ಅಭ್ಯರ್ಥಿಗಳು ಮತದಾರರಿಗೆ ಆಸೆ, ಆಮಿಷವನ್ನು ನೀಡುವುದರ ಮೂಲಕ ಮತಗಳನ್ನು ಖರೀದಿ ಮಾಡಿದ್ದಾರೆ, ಇಂತಹ ಜನ ಪ್ರತಿನಿಧಿಗಳಾದರೆ ಮತದಾರರಿಗೆ ಮುಂದೆ ಯಾವ ರೀತಿ ನ್ಯಾಯವನ್ನು ನೀಡುತ್ತಾರೆ ಎಂಬ ಅನುಮಾನ ಮೂಡಿದೆ ಎಂದರು.
ಚುನಾವಣಾಧಿಕಾರಿಗಳು ನಮ್ಮ ದೂರನ್ನು ತೆಗೆದುಕೊಂಡರೇ ವಿನಹ ಅದರ ಬಗ್ಗೆ ಯಾವ ಕ್ರಮವನ್ನು ತೆಗೆದುಕೊಂಡಿಲ್ಲ. ಇದರ ಬಗ್ಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗ ಸರಿಯಾದ ರೀತಿಯಲ್ಲಿ ಉತ್ತರ ನೀಡಲಿಲ್ಲ. ಇದಲ್ಲದೆ ಮೇ. 13ರ ಮತಗಳ ಎಣಿಕೆ ಸಮಯದಲ್ಲಿ ಹಣವನ್ನು ನೀಡಿದ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಜಯಗಳಿಸಿದರೆ ಅದನ್ನು ಪ್ರಕಟಿಸದಂತೆ ಮನವಿ ಮಾಡಲಾಗಿತ್ತು. ಅದರೆ ಚುನಾವಣಾಧಿಕಾರಿಗಳಿ ಇದರ ಬಗ್ಗೆ ಯಾವುದೇ ರೀತಿಯ ಉತ್ತರವನ್ನು ನೀಡದೇ ಗೆದ್ದವರಿಗೆ ಪ್ರಮಾಣ ಪತ್ರವನ್ನು ನೀಡಿದ್ದಾರೆ ಎಂದು ಆರೋಪಿಸಿದರು.
ಈ ಪ್ರಕರಣದ ಬಗ್ಗೆ ನಮಗೆ ಇಲ್ಲಿ ನ್ಯಾಯ ಸಿಗುವಂತೆ ಕಾಣುವುದಿಲ್ಲ ಈ ಹಿನ್ನಲೆಯಲ್ಲಿ ನಾವು ನ್ಯಾಯಾಲಯದ ಮೊರೆಯನ್ನು ಹೋಗುವುದಾಗಿ ಬೂತರಾಜ್ ತಿಳಿಸಿದ್ದು, ಇದೇ ರೀತಿ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲಿಯೂ ಸಹಾ ನಡೆದಿದೆ ಅವರು ಯಾರಾದರೂ ಸಹಾ ನಮ್ಮ ಜೊತೆ ಬಂದರೆ ಅವರನ್ನು ಸಹಾ ನ್ಯಾಯಾಲಯಕ್ಕೆ ಕರೆದ್ಯೂಲಾಗುವುದು ಎಂದರು.
ಗೋಷ್ಟಿಯಲ್ಲಿ ಶ್ರೀಕಾಂತ್ ಉಪಸ್ಥಿತರಿದ್ದರು.