ಸುದ್ದಿಒನ್, ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೇಶದ ಅತ್ಯಂತ ಶ್ರೀಮಂತ ಶಾಸಕ. ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ನ್ಯೂ) ವರದಿಯ ಪ್ರಕಾರ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರು 1,413 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ಶ್ರೀಮಂತ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2023 ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಶಿವಕುಮಾರ್ ಅವರು ಒಟ್ಟು 273 ಕೋಟಿ ರೂಪಾಯಿ ಸ್ಥಿರಾಸ್ತಿ ಮತ್ತು 1,140 ಕೋಟಿ ಚರ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದರು.
ಕುತೂಹಲಕಾರಿಯಾದ ಸಂಗತಿ ಏನೆಂದರೆ, ದೇಶದ ಅತ್ಯಂತ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಕರ್ನಾಟಕದ ಶಾಸಕರು ಪ್ರಾಬಲ್ಯ ಹೊಂದಿದ್ದು, ಮೊದಲ 20 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಹೊಂದಿದ್ದಾರೆ. ಎಡಿಆರ್ ವರದಿಯು ಕರ್ನಾಟಕದ ಶೇಕಡಾ 14 ರಷ್ಟು ಶಾಸಕರು ಕೋಟ್ಯಾಧಿಪತಿಗಳಾಗಿದ್ದು, ಪ್ರತಿಯೊಬ್ಬರೂ 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದ್ದಾರೆ.
ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿರುವ ಪಕ್ಷೇತರ ಶಾಸಕ ಮತ್ತು ಉದ್ಯಮಿ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು 1,267 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ನಂತರದ ಮೂರನೇ ಸ್ಥಾನದಲ್ಲಿ ವಿಧಾನಸಭೆಯ ಅತ್ಯಂತ ಕಿರಿಯ ಕಾಂಗ್ರೆಸ್ ಶಾಸಕರಾಗಿರುವ 39 ವರ್ಷ ವಯಸ್ಸಿನ ಪ್ರಿಯಾಕೃಷ್ಣ ಅವರು ರೂ. 1,156 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅವರ ತಂದೆ ಎಂ ಕೃಷ್ಣಪ್ಪ ಕೂಡ ಕರ್ನಾಟಕದ ಟಾಪ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ 18 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪಟ್ಟಿಯಲ್ಲಿನ ಮತ್ತೊಂದು ಪ್ರಮುಖ ಹೆಸರು ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ, 23 ನೇ ಸ್ಥಾನದಲ್ಲಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, ದೇಶದ ಬಡ ಶಾಸಕರೆಂದರೆ ಪಶ್ಚಿಮ ಬಂಗಾಳದ ಸಿಂಧೂ ಕ್ಷೇತ್ರದ ನಿರ್ಮಲ್ ಕುಮಾರ್ ಧಾರಾ ಅವರು ಕೇವಲ 1,700 ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅವರ ನಂತರ ಒಡಿಶಾದ ಪಕ್ಷೇತರ ಶಾಸಕ ಮಕರಂದ ಮುದುಲಿ ಅವರು ₹ 15,000 ಮತ್ತು ಪಂಜಾಬ್‌ನ ಎಎಪಿಯ ನರೀಂದರ್ ಪಾಲ್ ಸಿಂಗ್ ಸಾವ್ನಾ ಅವರ ಆಸ್ತಿ ಮೌಲ್ಯ ₹.18,370 ಹೊಂದಿದ್ದಾರೆ.
ಕರ್ನಾಟಕದ ಚುನಾಯಿತ ಶಾಸಕರ ಪೈಕಿ ಅತ್ಯಂತ ಬಡ ಶಾಸಕರೆಂದರೆ, ಬಿಜೆಪಿಯ ಭಾಗೀರಥಿ ಮುರುಳ್ಯ ಅವರ ಆಸ್ತಿ ಮೌಲ್ಯ 28 ಲಕ್ಷದ 2 ಲಕ್ಷ ರೂ. ಹೊಂದಿದ್ದಾರೆ.