ಬೆಂಗಳೂರು: ಶಾಲೆಗಳ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮೇ 29ರಿಂದ ಶಾಲೆಗಳ ಪ್ರಾರಂಭವಾಗಲಿದೆ. ಆದ್ರೆ ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದೆ. ಎಷ್ಟೋ ಶಾಲೆಗಳಲ್ಲಿ ಸರಿಯಾದ ವ್ಯವಸ್ಥೆಯೇ ಇಲ್ಲ. ಶಾಲೆಗಳ ಕಟ್ಟಡಗಳು ಸಹ ಶಿಥಿಲಾವಸ್ಥೆಯಲ್ಲಿವೆ. ಹೀಗಾಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಮುನ್ಸೂಚನೆ ನೀಡಿದೆ.
ಬಹುತೇಕ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರಣೆ ನೀಡಲಾಗಿದೆ.
* ಶಿಥಿಲಾವಸ್ಥೆ ತಲುಪಿರುವ ಶಾಲಾ ಕಟ್ಟಡ, ಗ್ರಂಥಾಲಯ, ಶೌಚಾಲಯವನ್ನು ಬಳಸದಂತೆ ಸೂಚನೆ ನೀಡಲಾಗಿದೆ.
* ಮಕ್ಕಳು ಆ ರೀತಿಯ ಕಟ್ಟಡಗಳ ಸುತ್ತ ಓಡಾಡದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಆದಷ್ಟು ಬೇಗ ತೆರವು ಮಾಡಬೇಕು ಎಂಬ ಸೂಚನೆ ನೀಡಿದ್ದಾರೆ.
* ಮಳೆಯಿಂದಾಗಿ ಶಾಲೆಗಳಿಗೆ ನೀರು ನುಗ್ಗಿದರೆ ಸ್ಥಳೀಯರು/ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಹಾಯ ಪಡೆದು, ನೀರನ್ನು ತೆರವುಗೊಳಿಸಬೇಕು. ಹಾಗೇ ಅಗತ್ಯಾನುಸಾರ ಶಾಲೆಗೆ ರಜೆ ಘೋಷಿಸಬೇಕು ಎಂದಿದ್ದಾರೆ.
ಮಳೆಯ ಜೊತೆಗೆ ಶಾಲೆ ಆರಂಭವಾಗುತ್ತಿದ್ದು, ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ, ಶೈಕ್ಷಣಿಕವಾಗಿಯೂ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.