ಸುದ್ದಿಒನ್, ಚಿತ್ರದುರ್ಗ : ಹಿರಿಯೂರು ತಾಲೂಕಿನಲ್ಲಿರುವ ವಾಣಿ ವಿಲಾಸ ಜಲಾಶಯ ಕೋಡಿ ಬೀಳುವುದಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಈಗಾಗಲೇ 129.85 ನೀರು ಸಂಗ್ರಹವಾಗಿದೆ. ಕೋಡಿ ಬೀಳುವುದಕ್ಕೆ 130 ಅಡಿ ತುಂಬಿದರೆ ಸಾಕು. ಇನ್ನುಳಿದ ನೀರು ತುಂಬಲು ಕೆಲವೇ ಗಂಟೆಗಳು ಬೇಕಷ್ಟೇ ಮೂರನೇ ಬಾರಿ ವಾಣಿ ವಿಲಾಸ ಕೋಡಿ ಬೀಳುವುದನ್ನು ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ.
ಈ ಸಂತಸವನ್ನು ಸಂಭ್ರಮಿಸಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ತಯಾರಿ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿಯಾಗಿ ಆಹ್ವಾನ ನೀಡಿದ್ದಾರೆ. ಜಿಲ್ಲಾಡಳಿತದಿಂದ ಕಾರ್ಯಕ್ರಮ ನಡೆಯುವ ಸ್ಥಳವನ್ನು ಪರಿಶೀಲನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು, ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೋಡಿ ಬೀಳುತ್ತಿರುವುದಕ್ಕೆ ಸಚಿವ ಡಿ.ಸುಧಾಕರ್ ಎಲ್ಲರಿಗಿಂತ ಹೆಚ್ಚಾಗಿ ಖುಷಿ ಪಡುತ್ತಿದ್ದಾರೆ. ಯಾಕಂದ್ರೆ 2016-18ರ ತನಕ ರಾಜ್ಯದಲ್ಲಿ ಮಳೆ ಇಲ್ಲದೆ ಬರ ಪರಿಸ್ಥಿತಿ ಉಂಟಾಗಿತ್ತು. ಈ ಪ್ರಕೃತಿ ವಿಕೋಪವನ್ನ ಡಿ ಸುಧಾಕರ್ ಅವರ ಮೇಲೆ ಹೊರಿಸಲಾಗಿತ್ತು. ಈ ಮೂಲಕ ಚುನಾವಣಾ ಲಾಭ ಮಾಡಿಕೊಳ್ಳಲಾಗಿತ್ತು. ಗಿಡ ಮರಗಳ ಒಣಗುವಿಕೆಯನ್ನು ಅಧಿಕಾರದಲ್ಲಿರುವವರ ಕಾಲ್ಗುಣಕ್ಕೆ ಹೋಲಿಕೆ ಮಾಡಲಾಗಿತ್ತು. ಅಂದು ಇದೆಲ್ಲದರ ಪರಿಣಾಮ ಸೋಲಾಗಿತ್ತು.
2023ರಲ್ಲಿ ಮತ್ತೆ ಗೆಲುವು ಕಂಡ ಸುಧಾಕರ್, ಈಗ ವಿವಿ ಸಾಗರ ನಾಲೆ ತುಂಬುವುದನ್ನು ಎದುರು ನೋಡುತ್ತಿದ್ದಾರೆ. ಅಂದು ಕಾಲ್ಗುಣದಿಂದ ಬರ ಬಂದಿದೆ ಎಂದವರಿಗೆ ಈ ಸಂಭ್ರಮ ತಿರುಗೇಟು ನೀಡಿದಂತಾಗಿದೆ. ಹೀಗಾಗಿ ವಿವಿ ಜಲಾಶಯದ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಸ್ವತಃ ಸುಧಾಕರ್ ಅವರೇ ಮುಂದೆ ನಿಂತು ನೋಡಿಕೊಳ್ಳುತ್ತಿದ್ದಾರೆ.