88 ವರ್ಷಗಳ ನಂತರ ವಿ.ವಿ.ಸಾಗರ ಜಲಾಶಯ ಸಂಪೂರ್ಣ ಭರ್ತಿಗೆ ಕ್ಷಣಗಣನೆ : ಐತಿಹಾಸಿಕ ಘಟನೆ ಕಣ್ಮನ ತುಂಬಿಕೊಳ್ಳಲು ಹೆಚ್ಚಿದ ಕಾತುರ

1 Min Read

ಚಿತ್ರದುರ್ಗ,(ಸೆಪ್ಟೆಂಬರ್01) : ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಬಯಲುಸೀಮೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದ್ದು, ಆ ಐತಿಹಾಸಿಕ ಘಟನೆ ಕಣ್ಮನ ತುಂಬಿಕೊಳ್ಳಲು ಕಾತುರ ಹೆಚ್ಚಿದೆ.

ವಿ.ವಿ.ಸಾಗರ ಜಲಾಶಯ ಸುಮಾರು 88 ವರ್ಷಗಳ ನಂತರ ಭರ್ತಿಯಾಗಲಿದ್ದು, ಕೋಡಿಯ ಮೂಲಕ ನದಿಗೆ ನೀರು ಹರಿಯಲಿದೆ. ವಿವಿ ಸಾಗರ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಿಂದಾಗಿ ಡ್ಯಾಂನ ಗರಿಷ್ಟ ಮಟ್ಟ ಸೆಪ್ಟೆಂಬರ್ 01ರಂದು ಗುರುವಾರ 129.85 ಅಡಿಗೆ ಏರಿಕೆಯಾಗಿದ್ದು, ಒಳಹರಿವು 4564 ಕ್ಯೂಸೆಕ್ ಇದೆ. ಗರಿಷ್ಟ ಮಟ್ಟ 130 ಅಡಿ ತಲುಪಲು ಇನ್ನೂ ಕೇವಲ 03 ಇಂಚು (ಕಾಲು ಅಡಿ) ಮಾತ್ರ ಬಾಕಿ ಇರುತ್ತದೆ. ಹೆಚ್ಚುವರಿ ನೀರು ಕೋಡಿಯ ಮೂಲಕ ನದಿಗೆ ಹರಿಯಲಿದ್ದು, ಈಗಾಗಲೇ ನದಿಪಾತ್ರದ ಇಕ್ಕೆಲಗಳ ಹಾಗೂ ತಗ್ಗು ಪ್ರದೇಶದ ಜನಗಳಿಗೆ ತಮ್ಮ ಆಸ್ತಿ-ಪಾಸ್ತಿ, ಜಾನುವಾರುಗಳನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಿಕೊಳ್ಳಲು ಪ್ರಕಟಣೆ ಹಾಗೂ ಪ್ರಚಾರದ ತಿಳುವಳಿಕೆ ನೀಡಲಾಗಿದೆ.

1933-34ರಲ್ಲಿ ಅಂದರೆ ಸುಮಾರು 88 ವರ್ಷಗಳ ನಂತರ ಡ್ಯಾಂ ಮತ್ತೆ ಕೋಡಿ ಬೀಳುತ್ತಿದ್ದು, ನದಿಪಾತ್ರವನ್ನು ಜಂಗಲ್, ಜಾಲಿ ಇತ್ಯಾದಿಗಳಿಂದ ಮುಕ್ತಗೊಳಿಸಿ ಸುಗಮ ಹರಿವಿಗೆ ಕ್ರಮಕೈಗೊಳ್ಳಲಾಗಿದೆ. ಇನ್ನೂ ಅಧಿಕ ನೀರು ಬಂದಲ್ಲಿ ಡ್ಯಾಂನ ಕೆಳಭಾಗದ ಕೆ.ಕೆ ಅಣೆಕಟ್ಟು ಮೂಲಕ ಕಾಲುವೆಗಾಗಲಿ ಅಥವಾ ನದಿಗಾಗಲಿ ನೀರು ಗೇಟಿನ ಮೂಲಕ ಹೊರಬಿಡಲು ಅವಕಾಶವಿದ್ದು, ಅನುಮತಿಗಾಗಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ.

ಡ್ಯಾಂ ಹಿನ್ನೀರಿನ ಹತ್ತಿರದ ಕೋಡಿಯ ಬಳಿ ಜನ-ಜಾನುವಾರು ನೀರಿಗಿಳಿಯದಂತೆ ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹಿರಿಯೂರು ಕ್ಯಾಂಪ್ ವಿಶ್ವೇಶ್ವರಯ್ಯ ಜಲನಿಗಮದ ಭದ್ರಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಆರ್.ಚಂದ್ರಮೌಳಿ ಕೋರಿದ್ದಾರೆ.

 

ಮಾಹಿತಿ ಮತ್ತು ಫೋಟೋ  : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

Share This Article
Leave a Comment

Leave a Reply

Your email address will not be published. Required fields are marked *