ಸುದ್ದಿಒನ್ ವೆಬ್ ಡೆಸ್ಕ್
ಕೇಂದ್ರ ಜಾಗೃತ ಆಯೋಗವು (ಸೆಂಟ್ರಲ್ ವಿಜಿಲೆನ್ಸ್ ಕಮಿಷನ್) 2022ನೇ ಸಾಲಿಗೆ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣಗಳ ಕುರಿತು ಇತ್ತೀಚಿಗೆ ವರದಿಯನ್ನು ಬಿಡುಗಡೆ ಮಾಡಿದೆ. ವರದಿ ಪ್ರಕಾರ ಕಳೆದ ವರ್ಷ ಎಲ್ಲ ಇಲಾಖೆಗಳಲ್ಲಿ ಸೇರಿ ಸಾರ್ವಜನಿಕರಿಂದ 1.15 ಲಕ್ಷ ಭ್ರಷ್ಟಾಚಾರ ದೂರುಗಳು ಬಂದಿವೆ. ಕೇಂದ್ರ ಗೃಹ ಇಲಾಖೆಯಲ್ಲಿ ಹೆಚ್ಚಿನ ದೂರುಗಳು ಬಂದಿವೆ ಎಂದು ಕೇಂದ್ರ ಜಾಗೃತ ಆಯೋಗ ತಿಳಿಸಿದೆ. ಭಾರತೀಯ ರೈಲ್ವೇ ಮತ್ತು ಬ್ಯಾಂಕ್‌ಗಳು ನಂತರದ ಸ್ಥಾನಗಳಲ್ಲಿವೆ ಎಂಬುದು ಗಮನಾರ್ಹ.
2022 ರಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 1.15 ಲಕ್ಷ ದೂರುಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 85,437 ದೂರುಗಳನ್ನು ಪರಿಹರಿಸಲಾಗಿದೆ ಎಂದು ಕೇಂದ್ರ ಜಾಗೃತ ಆಯೋಗವು ತಿಳಿಸಿದೆ. ಸಿವಿಸಿ ಪ್ರಕಾರ ಇನ್ನೂ 29 ಸಾವಿರ ಭ್ರಷ್ಟಾಚಾರ ದೂರುಗಳು ಬಾಕಿ ಇವೆ. ಈ 29 ಸಾವಿರ ದೂರುಗಳ ಪೈಕಿ 22 ಸಾವಿರ ದೂರುಗಳು 3 ತಿಂಗಳಿಗೂ ಹೆಚ್ಚು ಕಾಲದಿಂದಲೂ ಬಾಕಿ ಉಳಿದಿವೆ.
ಮತ್ತೊಂದೆಡೆ, ಕಳೆದ ವರ್ಷ ಒಟ್ಟು 1.15 ಲಕ್ಷ ದೂರುಗಳು ಬಂದಿದ್ದು, ಗೃಹ ಸಚಿವಾಲಯದಲ್ಲಿಯೇ ಕೆಲಸ ಮಾಡುವ ನೌಕರರ ವಿರುದ್ಧ ಗರಿಷ್ಠ 46,643 ಭ್ರಷ್ಟಾಚಾರ ದೂರುಗಳು ಬಂದಿವೆ ಎಂದು ಸಿವಿಸಿ ವರದಿಯಲ್ಲಿ ತಿಳಿಸಿದೆ.
40ರಷ್ಟು ಪ್ರಕರಣಗಳು ಈ ಒಂದು ಗೃಹ ಇಲಾಖೆ ವ್ಯಾಪ್ತಿಗೆ ಬಂದಿವೆ ಎಂದು ಹೇಳಲಾಗುತ್ತಿದೆ. 10,850 ಭ್ರಷ್ಟಾಚಾರ ದೂರುಗಳೊಂದಿಗೆ ರೈಲ್ವೆ ಇಲಾಖೆ ನಂತರದ ಸ್ಥಾನದಲ್ಲಿದೆ. 8129 ಭ್ರಷ್ಟಾಚಾರ ದೂರುಗಳೊಂದಿಗೆ ಮೂರನೇ ಸ್ಥಾನದಲ್ಲಿ ಬ್ಯಾಂಕ್‌ಗಳಿವೆ ಎಂದು ಕೇಂದ್ರ ಜಾಗೃತ ಆಯೋಗದ ಅಂಕಿಅಂಶಗಳು ಬಹಿರಂಗಪಡಿಸಿವೆ.
ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶದಲ್ಲಿ ಉದ್ಯೋಗಿಗಳ ವಿರುದ್ಧ 7370 ಭ್ರಷ್ಟಾಚಾರ ದೂರುಗಳು ಬಂದಿವೆ. ಅವರಲ್ಲಿ ಹೆಚ್ಚಿನವರು ದೆಹಲಿ ಅಭಿವೃದ್ಧಿ ಪ್ರಾಧಿಕಾರದಲ್ಲಿದ್ದರೆ, ದೆಹಲಿ ಮೆಟ್ರೋ ರೈಲು ನಿಗಮ ಮತ್ತು ದೆಹಲಿ ಅರ್ಬನ್ ಆರ್ಟ್ ಕಮಿಷನ್‌ನಂತಹ ಇಲಾಖೆಗಳು ನಂತರದ ಸ್ಥಾನದಲ್ಲಿವೆ.
CVC ವಾರ್ಷಿಕ ವರದಿಯು ಕಲ್ಲಿದ್ದಲು ಸಚಿವಾಲಯದಲ್ಲಿರುವವರ ವಿರುದ್ಧ 4,304 ದೂರುಗಳು (4,050 ವಿಲೇವಾರಿ), 4,236 ಕಾರ್ಮಿಕ ಸಚಿವಾಲಯದ ವಿರುದ್ಧ (4,016 ವಿಲೇವಾರಿ) ಮತ್ತು 2,617 ಪೆಟ್ರೋಲಿಯಂ ಸಚಿವಾಲಯದ ಉದ್ಯೋಗಿಗಳ ವಿರುದ್ಧ (2,409 ವಿಲೇವಾರಿ), ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ನೌಕರರ ವಿರುದ್ಧ 2,150 ದೂರುಗಳು, ರಕ್ಷಣಾ ಸಚಿವಾಲಯದ ನೌಕರರ ವಿರುದ್ಧ 1,619, ದೂರಸಂಪರ್ಕ ಇಲಾಖೆಯ ನೌಕರರ ವಿರುದ್ಧ 1,308, ಹಣಕಾಸು ಸಚಿವಾಲಯದ ನೌಕರರ ವಿರುದ್ಧ 1,202 ಮತ್ತು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ವಿರುದ್ಧ 1,101 ದೂರುಗಳು,
ವಿಮಾ ಕಂಪನಿಗಳಲ್ಲಿ ಕೆಲಸ ಮಾಡುವವರ ವಿರುದ್ಧ 987, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ನೌಕರರ ವಿರುದ್ಧ 970 ಮತ್ತು ಉಕ್ಕು ಸಚಿವಾಲಯದ ನೌಕರರ ವಿರುದ್ಧ 923 ದೂರುಗಳು ದಾಖಲಾಗಿವೆ ಎಂದು ಸಿವಿಸಿ ವರದಿ ತಿಳಿಸಿದೆ.