ಸುದ್ದಿಒನ್, ಚಿತ್ರದುರ್ಗ.ಸೆ.21: ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಸಮುದಾಯದ ಬಾಂಧವರ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ನಿಗಮದ ಅಧ್ಯಕ್ಷ ಕೆ.ವಿ. ರಾಮ್ ಪ್ರಸಾದ್ ಮನವಿ ಮಾಡಿದರು.
ನಗರದ ವಾಸವಿ ಮಹಲ್ ಪಕ್ಕದಲ್ಲಿರುವ ಕನ್ನಿಕಾಪರಮೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಭಾಗದ ಆರ್ಯವೈಶ್ಯ ಮಂಡಳಿಗಳು, ವಾಸವಿ ಸೇನೆ, ವಾಸವಿ ಯುವಜನ ಶಕ್ತಿ ಹಾಗೂ ಮಹಿಳಾ ಮಂಡಳಿಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ನಿಗಮದ ವಿವಿಧ ಯೋಜನೆಗಳ ಕುರಿತು ಮನದಟ್ಟು ಮಾಡಿಕೊಡಲಾಗಿದೆ ಎಂದರು.

ನಿಗಮದ ವತಿಯಿಂದ ‘ಸ್ವಯಂ ಉದ್ಯೋಗ ನೇರ ಸಾಲ ಯೋಜನೆ’, ‘ಅರಿವು ಶಿಕ್ಷಣ ಯೋಜನೆ’, ‘ಆಹಾರ ವಾಹಿನಿ ಯೋಜನೆ’ ಹಾಗೂ ‘ವಾಸವಿ ಗಂಗಾ ಕಲ್ಯಾಣ ಯೋಜನೆ’ಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಫಲಾನುಭವಿಗಳಿಗೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಸುಮಾರು 2,650 ಅರ್ಜಿಗಳು ಬಂದಿದ್ದವು. ನಿಗಮದ ಮೂಲ ಬಜೆಟ್ 10 ಕೋಟಿ ರೂ. ಹಾಗೂ ಸಾಲ ಮರುಪಾವತಿಯಿಂದ ಬಂದ ಹಣ ಸೇರಿ ಒಟ್ಟು ರೂ.12 ಕೋಟಿ ಮೊತ್ತದಲ್ಲಿ ಸೌಲಭ್ಯ ಕಲ್ಪಿಸಲಾಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಬಳಿಕ ಬಜೆಟ್‍ನಲ್ಲಿ ಹೆಚ್ಚುವರಿಯಾಗಿ 5 ಕೋಟಿ ರೂ. ಅನುದಾನ ಒದಗಿಸಿದರು. ಇದರಿಂದಾಗಿ ಒಟ್ಟು 1,720 ಅರ್ಹ ಅರ್ಜಿದಾರರಿಗೆ ಸಾಲ ಹಾಗೂ ಸೌಲಭ್ಯ ವಿತರಿಸಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರ ಬೆಂಬಲದಿಂದ ನಿಗಮದ ಕಾರ್ಯಚಟುವಟಿಕೆಗಳು ಚುರುಕಿನಿಂದ ಸಾಗುತ್ತಿವೆ. ಅಲ್ಲದೆ, ಸಾಲ ಮರುಪಾವತಿ ಪ್ರಕ್ರಿಯೆಯೂ ಉತ್ತಮವಾಗಿದ್ದು, ಶೇ. 85ರಷ್ಟು ಸಾಲ ಮರುಪಾವತಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಮುದಾಯದ ಅರ್ಹರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ನಿಗಮದ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕೋರಿದರು.
ಆರ್ಯವೈಶ್ಯ ಸಮುದಾಯದ ಬಡವರ ನೆರವಿಗೆ ಸರ್ಕಾರ ಬದ್ಧ: ಎಷ್ಟೇ ಆರ್ಥಿಕ ಸಂಕಷ್ಟ ಎದುರಾದರೂ ಕಷ್ಟವನ್ನು ಹೊರಹಾಕಿಕೊಳ್ಳದ ಸ್ವಾಭಿಮಾನಿ ಸ್ವಭಾವದಿಂದಾಗಿ ಆರ್ಯವೈಶ್ಯ ಸಮುದಾಯದಲ್ಲಿರುವ ಬಡವರ ನಿಖರ ಅಂಕಿ-ಅಂಶಗಳು ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿಗಮದ ವತಿಯಿಂದ ರಾಜ್ಯಾದ್ಯಂತ ಜಾಗೃತಿ ಮೂಡಿಸಿ, ಅರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ. ರಾಮ್‍ಪ್ರಸಾದ್ ತಿಳಿಸಿದರು.
ಬಹುರಾಷ್ಟ್ರೀಯ ಕಂಪನಿಗಳಿಂದ ವ್ಯಾಪಾರಕ್ಕೆ ಹೊಡೆತ: ಆರ್ಯವೈಶ್ಯ ಸಮುದಾಯವು ಸಾಂಪ್ರದಾಯಿಕವಾಗಿ ದಾನ-ಧರ್ಮ ಹಾಗೂ ವ್ಯಾಪಾರ-ವಹಿವಾಟಿಗೆ ಹೆಸರಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳ ವಹಿವಾಟಿಗೆ ಭಾರಿ ಹೊಡೆತ ಬಿದ್ದಿದೆ. ಪರಿಣಾಮವಾಗಿ ಸಮುದಾಯದಲ್ಲೂ ಅನೇಕ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟ ಮತ್ತು ಬಡತನ ಎದುರಿಸುತ್ತಿವೆ. ಈ ವಾಸ್ತವ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಕಡುಬಡವರಿಗೆ ಹೆಚ್ಚಿನ ಯೋಜನಾ ಸೌಲಭ್ಯ ತಲುಪಿಸಲು ಮನವಿ ಮಾಡಲಾಗಿದೆ ಎಂದರು.
ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಮುಖ ಮನವಿಗಳ ಪೈಕಿ ಎರಡು ಬೇಡಿಕೆಗಳನ್ನು ಕೇವಲ 15 ದಿನಗಳಲ್ಲೇ ಸರ್ಕಾರ ಈಡೇರಿಸಿದೆ. ಉಳಿದ ತಾಂತ್ರಿಕ ತೊಡಕುಗಳಿರುವ ಬೇಡಿಕೆಗಳನ್ನು ಶೀಘ್ರದಲ್ಲೇ ಪರಿಹರಿಸುವ ಭರವಸೆ ಸಿಕ್ಕಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮುದಾಯದ ಏಳಿಗೆಗೆ ಸಂಪೂರ್ಣ ಸಹಕಾರ ಹಾಗೂ ಶಕ್ತಿ ತುಂಬುವ ಭರವಸೆ ನೀಡಿದ್ದಾರೆ ಎಂದರು.

ರೂ. 3 ಕೋಟಿ ವಿದ್ಯಾರ್ಥಿವೇತನ ವಿತರಣೆ: ಕಳೆದ ಸಾಲಿನಲ್ಲಿ ನಿಗಮಕ್ಕೆ ಲಭ್ಯವಿದ್ದ ಅನುದಾನದಲ್ಲಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ರೂ.3 ಕೋಟಿಗೂ ಅಧಿಕ ಮೊತ್ತದ ವಿದ್ಯಾರ್ಥಿವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಸಂಪೂರ್ಣ ಪರಿಶೀಲನೆ ನಡೆಸಿ ಪಾರದರ್ಶಕವಾಗಿ ಸೌಲಭ್ಯ ತಲುಪಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಸ್ಥಳೀಯ ಆರ್ಯವೈಶ್ಯ ಮಂಡಳಿಗಳು ಹಾಗೂ ಸಂಸ್ಥೆಗಳ ನೆರವಿನಿಂದ ಅರ್ಹ ಬಡ ಕುಟುಂಬಗಳ ನಿಖರ ಮಾಹಿತಿ ಸಂಗ್ರಹಿಸಿ, ಸರ್ಕಾರದಿಂದ ಹೆಚ್ಚಿನ ನೆರವು ಕೊಡಿಸಲು ಶ್ರಮಿಸುವುದಾಗಿ ಅವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನಿಗಮದ ಯೋಜನೆಗಳ ಕುರಿತಾದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಆರ್ಯವೈಶ್ಯ ಸಂಘದ ಅಧ್ಯಕ್ಷ ಶಶಿಧರ ಗುಪ್ತ, ನಗರ ಅಧ್ಯಕ್ಷ ಎಲ್.ಇ.ಶ್ರೀನಿವಾಸ ಬಾಬು, ಉಪಾಧ್ಯಕ್ಷರಾದ ಹೆಚ್.ಎಂ.ಮಂಜುನಾಥ್, ಪಿ.ಎಲ್.ಸುರೇಶ್ ಬಾಬು, ಪ್ರಧಾನ ಕಾರ್ಯದರ್ಶಿ ನಾಗರಾಜ್.ಎಸ್, ಎಸ್.ಕೆ.ಪಿ. ಬ್ಯಾಂಕ್ ಅಧ್ಯಕ್ಷ ಪ್ರಾಣೇಶ್, ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಸಾತ್ವಿಕ್, ಅಭಿವೃದ್ಧಿ ಅಧಿಕಾರಿಗಳಾದ ವಿರೇಶ್.ಬಿ.ಟಿ. ದೇವೇಂದ್ರಪ್ಪ ಯಾಳಗಿ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.











