ಕೊರೊನಾವನ್ನು ಹಬ್ಬಿಸಿ ಇಡೀ ಪ್ರಪಂಚವನ್ನೇ ಆರ್ಥಿಕ ಸ್ಥಿತಿಯಲ್ಲಿ ಹಳ್ಳ ಹಿಡಿಸಿದ ದೇಶದಲ್ಲಿ ಮತ್ತೆ ಕೊರೊನಾ ಆರ್ಭಟ ಜೋರಾಗಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದೇ ದಿನಕ್ಕೆ 3.7 ಕೋಟಿ ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಮೂಲಕ ಅಂದಾಜು ಲೆಕ್ಕದಲ್ಲಿ ಶೇ.18 ರಷ್ಟು ಜನ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಬುಧವಾರ ರಾಷ್ಟ್ರೀಯ ಆರೋಗ್ಯ ಆಯೋಗ ಆಂತರಿಕ ಸಭೆಯನ್ನು ನಡೆಸಿತ್ತು. ಈ ವೇಳೆ ಅಧಿಕಾರಿಗಳು ಅಂಕಿ ಸಂಖ್ಯೆಯನ್ನು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚೀನಾದಲ್ಲಿ ಒಂದೇ ದಿನ ದಾಖಲೆಯ ಮಟ್ಟಕ್ಕೆ ಸೋಂಕಿತರು ಪತ್ತೆಯಾಗಿದ್ದಾರೆ. ಡಿಸೆಂಬರ್ ಮೊದಲ 20 ದಿನದಲ್ಲಿ ಶೇ.18ರಷ್ಟು ಜನ ಸೋಂಕಿಗೆ ತುತ್ತಾಗಿದ್ದಾರೆ.
ಇನ್ನು ವೈರಲ್ ಆಗುತ್ತಿರುವ ವಿಡಿಯೋಗಳನ್ನು ನೋಡುತ್ತಿದ್ದರೆ, ಚೀನಾದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳು ಸಿಗದೆ ಬೀದಿ ಬೀದಿಯಲ್ಲಿಯೇ ಗ್ಲೂಕೋಸ್ ಬಾಟೆಲ್ ಗಳನ್ನು ಹಾಕಿಕೊಂಡು ಜನ ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಇನ್ನು ಚೀನಾದ ಸ್ಥಿತಿ ದಿನೇ ದಿನೇ ಚಿಂತಾಜನಕವಾಗುತ್ತಿದ್ದು, ವೈರಸ್ ಭಾರತಕ್ಕೆ ಹರಡದಂತೆ ಸಾಕಷ್ಟು ಮುಂಜಾಗ್ರತ ಕ್ರಮ ವಹಿಸಲಾಗುತ್ತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಸಭೆಗಳನ್ನು ನಡೆಸಿ, ಜನರಿಗೂ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ. ಕೊರೊನಾದಿಂದ ರಕ್ಷಿಸಿಕೊಳ್ಳುವುದಕ್ಕೆ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ.