ಕೊಡಗು: ಕೊರೊನಾ ಎಂದರೆ ಇಡೀ ಜಗತ್ತು ಭಯ ಪಡುತ್ತದೆ. ಅಷ್ಟು ಜೀವನದ ಪಾಠ ಕಲಿಸಿದೆ. ಇನ್ನು ಕೂಡ ಅದೆಷ್ಟೋ ಜನ ನಷ್ಟದಿಂದ ಮೇಲೆ ಎದ್ದಿಲ್ಲ. ಈಗ ಮತ್ತೆ ರಾಜ್ಯಕ್ಕೆ ಕೊರೊನಾ ಬರುತ್ತೆ ಅಂದಾಗ ಜನರ ಮನಸ್ಥಿತಿ ಏನಾಗಬೇಡ. ಈಗ ಆತಂಕ ಮತ್ತೆ ಶುರುವಾಗಿದೆ. ಕೇರಳದಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತಿದೆ.
ಇದರ ಆತಂಕದಿಂದ ರಾಜ್ಯದಲ್ಲೂ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ವಿರಾಜಪೇಟೆಯಲ್ಲಿ ತಪಾಸಣೆ ಮಾಡಲಾಗುತ್ತಿದೆ. ರಾಜ್ಯಕ್ಕೆ ಕೇರಳದಿಂದ ಆಗಮಿಸುವವರ ತಪಾಸಣೆ ನಡೆಸಲಾಗುತ್ತಿದೆ. ಈಗಾಗಲೇ ವಿರಾಜಪೇಟೆಯಲ್ಲಿ ಇಬ್ಬರು ಶಂಕಿತರಿದ್ದು, ಇಬ್ಬರಿಗೂ ರಕ್ತ ಪರೀಕ್ಷೆಮಾಡಿಸಲಾಗಿದೆ. ಪಾಸಿಟಿವ್ ಬಂದರೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗುತ್ತದೆ.
ಕೊರೊನಾ ಆತಂಕದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದ್ದು, 60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಕಾಯಿಲೆ ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೇಂದ್ರ ಸರ್ಕಾರ ಹಾಗೂ ತಜ್ಞರ ಜೊತೆಗೆ ಚರ್ಚೆ ನಡೆಸಲಾಗಿದೆ. ಎಲ್ಲಾ ರೀತಿಯ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಗತ್ಯ ಕ್ರಮ ಕೈಗೊಳ್ಳಲು ಚರ್ಚೆ ನಡೆಸಿದ್ದೇವೆ. ಹೆಚ್ಚು ಟೆಸ್ಟ್ ಮಾಡುವತೆ ಆರೋಗ್ಯ ಇಲಾಖೆ ಸೂಚಿಸಿದೆ. ಕೊರೊನಾ ಲಕ್ಷಣ ಇದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೇರಳ ಗಡಿಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದಿದ್ದಾರೆ.