ದಾವಣಗೆರೆ: ಇತ್ತೀಚೆಗೆ ಈ ಲಾಕ್ಡೌನ್ ಅನ್ನೋ ಪದ ಕೇಳಿದ್ರೇನೆ ಜನ ಭಯ ಭೀತರಾಗಿದ್ದಾರೆ. ಮತ್ತೆ ಲಾಕ್ಡೌನ್ ಏನಾದ್ರೂ ಆದ್ರೆ ಜೀವನ ಬೀದಿಗೆ ಬೀಳೋದರಲ್ಲಿ ಅನುಮಾನವಿಲ್ಲ ಎಂಬುದು ಮಧ್ಯಮವರ್ಗ, ಬಡ ಜನರ ನೋವು. ಯಾಕಂದ್ರೆ ಎರಡು ವರ್ಷಗಳಿಂದ ಎರಡು ಬಾರಿ ಲಾಕ್ಡೌನ್ ಮಾಡಿ ಜೀವನ ದುಸ್ಥಿಗೆ ಬರುವಂತೆ ಆಗಿದೆ. ಈಗ ಮತ್ತೆ ಲಾಕ್ಡೌನ್ ಆದ್ರೆ ಮುಂದೆ ಕಥೆ ಏನು ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದಾರೆ.
ದೇಶದ ಹಲವೆಡೆ ಈಗಾಗಲೇ ಕೊರೊನಾ ಭೀತಿ ಎದುರಾಗಿದೆ. ಕೊರೊನಾ ಹೆಚ್ಚಳದಿಂದಾಗಿ ಆತಂಕ ಶುರುವಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಹೊಸದಾಗಿ ಓಮಿಕ್ರಾನ್ ಮತ್ತಷ್ಟು ಭಯ ಹುಟ್ಟಿಸಿದೆ. ಈ ಬಗ್ಗೆ ಜಿಲ್ಲೆಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಓಮಿಕ್ರಾನ್ ಬಗ್ಗೆ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳುತ್ತಿದೆ. ಹೊರ ದೇಶದಿಂದ ಬಂದಂತವರನ್ನ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೇರಳದಿಂದ ಬಂದಂತ ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ ಎಂದಿದ್ದಾರೆ.
.
ಇನ್ನು ಲಾಕ್ಡೌನ್ ಬಗ್ಗೆ ಮಾತನಾಡಿದ ಸಿಎಂ, ಲಾಕ್ಡೌನ್ ಮಾಡುವ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ಆ ಬಗ್ಗೆ ಜನ ಹೆದರುವ ಅವಶ್ಯಕತೆ ಇಲ್ಲ. ಈಗ ನಾವೂ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುತ್ತಿದ್ದೇವೆ. ಬೂಸ್ಟರ್ ಡೋಸ್ ಬಗ್ಗೆಯೂ ಕೇಂದ್ರ ಸರ್ಕಾರದ ಬಳಿ ಮಾತನಾಡುತ್ತಿದ್ದೇವೆ ಎಂದಿದ್ದಾರೆ.