- ಜಿಲ್ಲಾ ಕಸಾಪ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ಆಯೋಜನೆ
- ಗೋನೂರು ನಿರಾಶ್ರಿತರ ಪುನರ್ವಸತಿಯಲ್ಲಿ ನಾವಾಡುವ ನುಡಿಯೇ ಕನ್ನಡ ನುಡಿ
ಚಿತ್ರದುರ್ಗ, (ನ.19): ಕನ್ನಡ ಭಾಷೆ,ಕಲೆ, ಸೊಗಡು ಉಳಿಯಲು ರೋಟರಿ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಸಹಕಾರ ನೀಡಿದರೆ ಮಾತ್ರ ಕಸಾಪವು ಭಾಷೆ, ಸಂಸ್ಕೃತಿಯ ಜೀವಂತಿಕೆಗೊಳಿಸುವ ಕಾರ್ಯಕ್ರಮಗಳನ್ನು ನೀಡಲು ಸಾಧ್ಯ ಎಂದು ಚಿತ್ರದುರ್ಗ ರೋಟರಿ ಕ್ಲಬ್ ಅಧ್ಯಕ್ಷ ಇ.ಅರುಣ್ ಕುಮಾರ್ ಹೇಳಿದರು.
ಸಮೀಪದ ಗೋನೂರು ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾ ಕಸಾಪ, ಅಖಿಲ ಭಾರತ ವೀರಶೈವ ಮಹಾಸಭಾ, ಹಾಗು ರೋಟರಿ ಕ್ಲಬ್ ಸಹಯೋಗದಲ್ಲಿ ಶುಕ್ರವಾರ ನಡೆದ ನಾವಾಡುವ ನುಡಿಯೇ ಕನ್ನಡ ನುಡಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ರೋಟರಿ ಸಂಸ್ಥೆಯು ತನ್ನದೇ ಆದ ಸಮಾಜಮುಖಿ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹಿಸುತ್ತಲೇ ಬಂದಿದೆ. ಈಗ ಕನ್ನಡ ಸಾಹಿತ್ಯ ಪರಿಷತ್ ರೋಟರಿ ಸಹಯೋಗದೊಂದಿಗೆ ಇಂತಹ ಸ್ಥಳದಲ್ಲಿ ಕನ್ನಡ ಗೀತೆಗಾಯನಗಳ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರ. ಭಾಷೆ, ಸಂಸ್ಕøತಿಯನ್ನು ಬಿಂಬಿಸುವ ಕಲೆಯನ್ನು ಜೀವಂತವಾಗಿರಿಸುವ ಇಂತಹ ಕೆಲಸಗಳಿಗೆ ರೋಟರಿ ಸಂಸ್ಥೆ ಯಾವಾಗಲೂ ಬೆಂಬಲವಾಗಿರುತ್ತದೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ರೇಣುಕಾ ಪ್ರಸನ್ನ ಮಾತನಾಡಿ, ಜೀವನದಲ್ಲಿ ಆಕಸ್ಮಿಕವಾಗಿ ಜರುಗಿದ ಘಟನೆಗಳಿಂದಾಗಿ ನೀವುಗಳು ಈ ಪುನರ್ವಸತಿ ಕೇಂದ್ರಕ್ಕೆ ಬಂದಿದ್ದೀರಿ. ಬೇಗ ಗುಣಮುಖವಾಗಿ ನಿಮ್ಮ ಪರಿವಾರದೊಂದಿಗೆ ಜೀವನ ಕಳೆಯಿರಿ. ಇಲ್ಲಿನ ವಾತಾವರಣ ಸುಂದರವಾಗಿದ್ದು, ಯಾರಿಗಾದರೂ ಇಲ್ಲಿಂದ ಹೊರಹೋಗಲು ಮನಸ್ಸಾಗುವುದಿಲ್ಲ. ಆದರೆ ಕುಟುಂಬ ದೊಡ್ಡದು ಅವರೊಂದಿಗಿನ ಜೀವನ ಸಾಗಿಸಲು ಪ್ರಯತ್ನಿಸಿರಿ. ರಾಜ್ಯದ ಹಲವಾರು ಪುನರ್ವಸತಿ ಕೇಂದ್ರಗಳನ್ನು ನೋಡಿದ್ದೇನೆ. ಇಲ್ಲಿನ ಕೇಂದ್ರವೇ ಭಿನ್ನವಾಗಿದೆ. ಈ ಕೇಂದ್ರದ ಮಹದೇವಯ್ಯನವರು ಮಾತೃ ಹೃದಯದಿಂದ ನಿಮ್ಮನ್ನು ಸಲಹುತ್ತಿದ್ದಾರೆ ಎಂದು ನಿಮ್ಮನ್ನು ನೋಡಿದರೆ ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಪುನರ್ವಸತಿ ಕೇಂದ್ರದ ವಾತಾವರಣವನ್ನು ಶ್ಲಾಘಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ನಾವಾಡುವ ನುಡಿಯೇ ಕನ್ನಡ ನುಡಿ ಸರಣಿ ಕಾರ್ಯಕ್ರಮವನ್ನು ವಿಭಿನ್ನ ಸ್ಥಳದಲ್ಲಿ ಆಯೋಜಿಸುತ್ತಾ ಬಂದಿದೆ. ಕಳೆದ ವಾರ ಜಿಲ್ಲಾ ಕಾರಗೃಹದಲ್ಲಿ ಆಯೋಜಿಸಲಾಗಿತ್ತು. ಈಗ ಇಲ್ಲಿನ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿದೆ. ಇಂತಹ ಕಾರ್ಯಕ್ರಮಕ್ಕೆ ಈ ಕೇಂದ್ರದ ಅಧೀಕ್ಷಕರಾದ ಮಹದೇವಯ್ಯ, ಅಖಿಲ ಭಾರತ ವೀರಶೈವ ಮಹಾಸಭಾ ಹಾಗು ರೋಟರಿ ಕ್ಲಬ್ ಕೈಜೋಡಿಸಿವೆ. ಕಸಾಪ ಕಾರ್ಯ ಚಟುವಟಿಕೆಗಳು ಸುಗಮವಾಗಿ ಜರುಗಲು ಕನ್ನಡ ಪರ ಮನಸ್ಸುಗಳುಳ್ಳ ಸಂಘ, ಸಂಸ್ಥೆಗಳು ಸಹಕಾರ ನೀಡಬೇಕು ಆಗಲೇ ಜಿಲ್ಲೆಯಲ್ಲಿ ಕಸಾಪ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಸಹಕಾರವಾಗುತ್ತದೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ನಗರ ಘಟಕದ ಅಧ್ಯಕ್ಷ ಜೆ.ಆನಂದ್, ನಿರಾಶ್ರಿತರ ಪುನರ್ವಸತಿ ಕೇಂದ್ರದ ಅಧೀಕ್ಷಕರಾದ ಮಹದೇವಯ್ಯ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ಗಾಯಕರಾದ ಎಂ.ಕೆ.ಹರೀಶ್, ಹಿಮಂತ್‍ರಾಜ್, ಕೆ.ಗಂಗಾಧರ ಅಮುಕುಂದಿ, ಮೈಲಾರಿ, ಅಂಜಿನಪ್ಪ ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮದಲ್ಲಿ ನಿರಾಶ್ರಿತರ ಪುನರ್ವಸತಿ ಕೇಂದ್ರದ ಗಣೇಶ್ ಹಾಡಿದ್ದು ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಕಸಾಪ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಕೋಶಾಧ್ಯಕ್ಷ ಚೌಳೂರು ಲೋಕೇಶ್, ಸಂಚಾಲಕ ಶ್ರೀನಿವಾಸ್ ಮಳಲಿ, ನಿರ್ದೇಶಕರಾದ ರೀನಾ ವೀರಭದ್ರಪ್ಪ, ಮಲ್ಲಾಪುರ ಸೇವಾ ಸಹಕಾರ ಸಂಘದ ಸಿದ್ಧಪ್ಪ ಅಖಿಲ ಭಾರತ ವೀರಶೈವ ಮಹಾಸಭಾದ ಆರತಿ ಶಿವಮೂರ್ತಿ ಮತ್ತು ಪದಾಧಿಕಾರಿಗಳು ಇದ್ದರು.