ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ.ಡಿ.30: ಕೋವಿಡ್ 4ನೇ ಅಲೆ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ವಿವಿಧ ಇಲಾಖೆಯವರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಎಂದು ಚಿತ್ರದುರ್ಗ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಹೇಳಿದರು.

ನಗರದ ತಹಶೀಲ್ದಾರ್ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ 4ನೇ ಅಲೆ ಮುಂಜಾಗ್ರತಾ ಕ್ರಮ ಮತ್ತು ಪೂರ್ವಸಿದ್ಧತೆ ಬಗ್ಗೆ ತಾಲ್ಲೂಕು ಚಾಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್ 4ನೇ ಅಲೆ ನಿಯಂತ್ರಣ ನಿರ್ವಹಣೆಯಲ್ಲಿ ಈ ಹಿಂದಿನಂತೆಯೇ ಎಲ್ಲಾ ಇಲಾಖೆಯವರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ 1, 2 ಮತ್ತು 3ನೇ ಅಲೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದೀರಾ, ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಕೋವಿಡ್ ಮುನ್ನೆಚ್ಚರಿಕಾ ಲಸಿಕಾ ವರೆಸೆಗಳು ತಪ್ಪದೇ ಅರ್ಹ ಫಲಾನುಭವಿಗಳಿಗೆ ಕೊಡಿಸಿ ಎಂದು ಹೇಳಿದರು.
ನಗರಸಭೆಯವರು ಎಲ್ಲಾ ವ್ಯಾಪಾರ, ವ್ಯವಹಾರ ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್ ಧಾರಣೆಗೆ ಕ್ರಮ ಜರುಗಿಸಿ, ಶಿಕ್ಷಣ ಇಲಾಖೆಯವರು ಎಲ್ಲಾ ಶಾಲೆಗಳಲ್ಲಿ ಪ್ರಾರ್ಥನೆಯ ನಂತರ ಮಕ್ಕಳಿಗೆ ಸ್ಯಾನಿಟೈಜರ್ ಬಳಕೆ, ಮಾಸ್ಕ್ ಧಾರಣೆ ಮತ್ತು ಮಕ್ಕಳ ಪೋಷಕರು ಕೋವಿಡ್ ಬೂಸ್ಟರ್ ಡೋಸ್ ಪಡೆಯುವ ಬಗ್ಗೆ ಆರೋಗ್ಯ ಶಿಕ್ಷಣ ಪ್ರತಿ ದಿನ ನಿರ್ವಹಿಸಲು ಮಾರ್ಗದರ್ಶನ ನೀಡಿ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ತಾಲ್ಲೂಕಿನಲ್ಲಿ ಭರಮಸಾಗರ, ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರಗಳ ಸಿದ್ಧತೆ, ಲಕ್ಷಣವಿರುವವರಿಗೆ ಕೋವಿಡ್ ಟೆಸ್ಟ್ , ಬೂಸ್ಟರ್ ಡೋಸ್ ವಿತರಣೆ ಮಾಡುವ ಇತರೆ ಪರಿಕರಗಳ ಪೂರ್ವಸಿದ್ಧತೆ ಬಗ್ಗೆ ಸಭೆಗೆ ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ತಾಲ್ಲೂಕು ಯೋಜನಾಧಿಕಾರಿ ರಾಘವೇಂದ್ರ, ಮಹಿಳಾ ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಸುಧಾ, ಸಮಾಜ ಕಲ್ಯಾಣ ಇಲಾಖೆಯ ಅನಿತಾ, ಬಿ.ಸಿ.ಎಂ ಅಧಿಕಾರಿ ಪುಷ್ಪ ಎಸ್.ಗಡ್ಡಿ, ನಗರಸಭೆ ಅಧಿಕಾರಿ ಭಾರತಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್, ಗಂಗಾಧರ್, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ತಂಡದ ವೈದ್ಯರಾದ, ಸುಪ್ರಿತಾ, ಮಂಜುಳಾ, ವಾಣಿ, ಮಹೇಂದ್ರ ಇತರರು ಉಪಸ್ಥಿತರಿದ್ದರು.

