ಸದೃಢ ಭಾರತಕ್ಕೆ ಯುವಜನತೆಯ ಕೊಡುಗೆ ಮುಖ್ಯ : ಪ್ರಾಚಾರ್ಯ ಡಾ. ಎಲ್. ಈಶ್ವರಪ್ಪ

1 Min Read

 

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 25 –  ಸದೃಢ ಭಾರತಕ್ಕೆ ಯುವಜನತೆಯ ಕೊಡುಗೆ ಮುಖ್ಯ. ವಿದ್ಯಾರ್ಥಿಗಳ ಶ್ರಮದ ಜತೆಗೆ ಸ್ಥಳೀಯರು ಕೂಡ ಕೈ ಜೋಡಿಸಿದಾಗ ಗ್ರಾಮಗಳು ಉದ್ಧಾರವಾಗಲು ಸಾಧ್ಯ. ಸೇವೆ ನಮ್ಮದು ಸಹಕಾರ ಗ್ರಾಮದವರದು ಎಂದು ಪ್ರಾಚಾರ್ಯ ಡಾ. ಎಲ್. ಈಶ್ವರಪ್ಪ  ಹೇಳಿದರು.

ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗು ದಾವಣಗೆರೆ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತಮಟಕಲ್ಲು ಗ್ರಾಮದಲ್ಲಿ ದಿ. 24-12-23 ರಿಂದ 30-12-23 ರವರೆಗೆ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಸೇವಾ ಯೋಜನೆ ಘಟಕ- ಹಾಗೂ 2ರ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಅತಿಥಿ ಎನ್. ಚಲುವರಾಜ್ ಮಾತನಾಡಿ, ರಾಷ್ಟ್ರಿಯ ಸೇವಾ ಯೋಜನೆ ಭಾರತ ಸರ್ಕಾರದ ನಿಯೋಜಿತ ಕಾರ್ಯಕ್ರಮವಾಗಿದ್ದು, 1969ರಲ್ಲಿ ಈ ಯೋಜನೆಗೆ ಚಾಲನೆ ಸಿಕ್ಕಿತು. ಗ್ರಾಮಸ್ವರಾಜ್ಯದ ಎಲ್ಲ ಮಹತ್ವಗಳು ಇಲ್ಲಿ ಅಡಕವಾಗಿವೆ. ಈ ಸೇವೆಯನ್ನು ರಾಷ್ಟ್ರಕ್ಕೆ ಸಮರ್ಪಿತ ಎಂಬುದಾಗಿ ಮಾಡಬೇಕು. ಸ್ವಚ್ಛತೆ ನಮ್ಮ ಉದ್ದೇಶವಾಗಬೇಕು. ಇದೊಂದು ವಿಶೇಷ ಅನುಭವ ಪಡೆಯುವ ವೇದಿಕೆಯಾಗಿದೆ ಎಂದು ಹೇಳಿದರು.

ಪ್ರೊ. ಸಿ. ಬಸವರಾಜಪ್ಪ ಮಾತನಾಡುತ್ತ, ತಮಟಕಲ್ಲು ಗ್ರಾಮದ ಜನರು ಇಂತಹ ಕಾರ್ಯಕ್ರಮಗಳಿಗೆ ಉತ್ತಮ ಬೆಂಬಲ ನೀಡುತ್ತಾರೆ. ತಮ್ಮನ್ನು ಅರ್ಪಿಸಿಕೊಳ್ಳುವುದನ್ನು ಸೇವೆ ಎಂದು ಕರೆಯಲಾಗುತ್ತದೆ. ಪ್ರತಿಫಲಾಪೇಕ್ಷೆ ಇರಬಾರದು. ಗ್ರಾಮಗಳ ಸ್ವಚ್ಛತೆಯನ್ನು ಮಾಡುವ ಗುರಿ ನಮ್ಮದಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪ ಶ್ರಮವನ್ನು ಹಳ್ಳಿಗಳಿಗೆ ಸ್ವಚ್ಛತೆಗೆ ಮೀಸಲಿಡಲಿ ಎಂಬುದು ಮಹಾತ್ಮ ಗಾಂಧೀಜಿಯವರ ಆಶಯವಾಗಿದೆ. ಅವರ ಕನಸಿನಂತೆ ರಾಷ್ಟ್ರದಲ್ಲಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಈ ಸೇವೆ ಪ್ರಾರಂಭವಾಯಿತು. ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ಸಮಯ ಪಾಲನೆ ಅತಿಮುಖ್ಯ. ಎನ್‍ಎಸ್‍ಎಸ್‍ನಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನಗೊಂಡು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರುದ್ರಮ್ಮ, ಕೆ.ಸಿ. ನಾಗರಾಜ್, ಜಿ.ಎಸ್.ನಾಗರಾಜು, ಮಂಜುನಾಥ, ಕುಮಾರ್, ಮಧು ವೇದಿಕೆಯಲ್ಲಿದ್ದರು.

ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆ ಬಗ್ಗೆ ಎನ್.ಎಸ್.ಎಸ್. ಶಿಬಿರಾರ್ಥಿಗಳಿಂದ ಪಥಸಂಚಲನ ನಡೆಯಿತು. ಬೇಬಿ ಸ್ವಾಗತಿಸಿದರು. ಉಷಾ ಮತ್ತು ರುಚಿತಾ ನಿರೂಪಿಸಿದರು. ವರ್ಷಿತ ಪ್ರಾರ್ಥಿಸಿದರು. ದಾಕ್ಷಾಯಣಿ ವಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *