ರಾಜ್ಯಾದ್ಯಂತ ಮಳೆರಾಯ ಜೋರಾಗಿದ್ದಾನೆ. ಹಲವೆಡೆ ಮಳೆಯಿಂದಾಗಿ ಅವಾಂತರವೂ ಸೃಷ್ಟಿಯಾಗಿದೆ. ಉತ್ತರ ಕನ್ನಡದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಹೊರವಲಯದ ಮಹಾಮಯಾ ದೇವಾಲಯಕ್ಕೆ ನೀರು ನುಗ್ಗಿದೆ. ಕಾಳಿ ನದಿ, ಕದ್ರಾ ಡ್ಯಾಂ ತುಂಬಿ ತುಳುಕುತ್ತಿದೆ. ಡ್ಯಾಂ ನಿಂದ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಸುತ್ತ ಮುತ್ತ ವಾಸಿಸುತ್ತಿರುವ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.
ಧಾರವಾಡ ತಾಲೂಕಿನ ಅಂಬಲಿಕೊಪ್ಪ ಬಳಿ ಸೇತುವೆ ಮುಳುಗಡೆಯಾಗಿದೆ. ಉಕ್ಕಿ ಹರಿಯುತ್ತಿರುವ ಬೇಡ್ತಿ ಹಳ್ಳದಿಂದ ನೀರು ಹೆಚ್ಚಾಗಿ ಸೇತುವೆ ಮುಳುಗಡೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಶೃಂಗೇರಿ ಪಟ್ಟಣದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಶೃಂಗೇರಿ ದೇಗುಲ ಬಳಿಯ ಗಾಂಧಿ ಮೈದಾನ ಸಂಪೂರ್ಣ ಜಲಾವೃತವಾಗಿದೆ. ಕೆಲ ರಸ್ತೆಗಳು ಜಲಾವೃತಗೊಂಡಿವೆ. ಅಂಗಡಿಗಳಿಗೆ ನದಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಶೃಂಗೇರಿ ದೇವಾಲಯದ ಗಾಂಧಿ ಮೈದಾನದ ಬಳಿಯ ಅಂಗಡಿ ಮಳಿಗೆಗಳನ್ನು ಸ್ಥಳಾಂತರಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಂಗಡಿಗಳನ್ನು ತೆರೆವುಗಳಿಸಲು ತಾಲೂಕು ಆಡಳಿತ ಸೂಚನೆ ನೀಡಿದೆ. ದೇವಾಲಯದ ಸುತ್ತಮುತ್ತಲಿನ ಇನ್ನಷ್ಟು ಪ್ರದೇಶಗಳು ಮುಳುಗಡೆ ಆತಂಕ ಅನುಭವಿಸುತ್ತಿವೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿಲ್ಲದ ವರುಣನ ಆರ್ಭಟ. ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಮಲಪ್ರಭಾ ನದಿ. ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಕ್ಕದಲ್ಲಿ ಮಣ್ಣು ಕುಸಿತವಾಗಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಪಾರಿಷ್ವಾಡ ಗ್ರಾಮದಲ್ಲೂ ಆತಂಕ ಹೆಚ್ಚಾಗಿದೆ. ಹಿರೇಮನಹಳ್ಳಿ ಗ್ರಾಮ ಸೇರಿದಂತೆ 30 ಗ್ರಾಮಗಳಿಗೆ ಸಂಪರ್ಕಿಸುವ ಪರಿಸ್ವಾಡ ಗ್ರಾಮದ ಸೇತುವೆ ಮುಳುಗಡೆಯಾಗಿದೆ.
ಕೊಡಗು ಜಿಲ್ಲೆಯಲ್ಲೂ ಮಳೆ ಜೋರಾಗಿದೆ. ಮೂರ್ನಾಡು – ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದ. ಸುಂಟಿಕೊಪ್ಪ ಮಾದಾಪುರ ರಸ್ತೆ ಮಧ್ಯೆ ಮರ ಧರೆಗುರುಳಿದೆ. ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿದೆ. ಕೊಡಗು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.