ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.14 : ಭದ್ರಾಮೇಲ್ದಂಡೆ ಯೋಜನೆಗೆ ಕಾಯ್ದಿರಿಸಿರುವ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸದ ಕೇಂದ್ರ ಸರ್ಕಾರದ ವಿರುದ್ದ ರೈತರು ಮಂಗಳವಾರ ರಾತ್ರಿ ಗಾಂಧಿವೃತ್ತದಲ್ಲಿ ಪಂಜಿನ ಮೆರವಣಿಗೆ ನಡೆಸಿ ದೇಶದ ಪ್ರಧಾನಿ ಮೋದಿ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿರುವ ಕೇಂದ್ರ ಸರ್ಕಾರ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವಿವಿಧ ಜನಪರ ಸಂಘಟನೆಗಳು ಕಳೆದ ಹದಿನಾಲ್ಕು ದಿನಗಳಿಂದಲೂ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಮೆಜೆಸ್ಟಿಕ್ ವೃತ್ತದಿಂದ ಗಾಂಧಿವೃತ್ತದವರೆಗೂ ಪಂಜಿನ ಮೆರವಣಿಗೆ ನಡೆಸಿ ರೈತ ವಿರೋಧಿ ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಗಾಂಧಿವೃತ್ತದಲ್ಲಿ ಪಂಜಿನ ಮೆರವಣಿಗೆಯನ್ನುದ್ದೇಶಿಸಿ ಮಾತನಾಡುತ್ತ ಕಳೆದ 27 ವರ್ಷಗಳಿಂದಲೂ ಭದ್ರಾಮೇಲ್ದಂಡೆ ಯೋಜನೆಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮ್ಮ ಮೇಲೆ ಸವಾರಿ ಮಾಡುತ್ತ ಬರುತ್ತಿವೆಯೇ ವಿನಃ ಹಣ ಮಾತ್ರ ಬಿಡುಗಡೆ ಮಾಡುತ್ತಿಲ್ಲ. ಮಳೆ ಬೆಳೆಯಿಲ್ಲದೆ ಬರಗಾಲಕ್ಕೆ ತುತ್ತಾಗಿರುವ ಚಿತ್ರದುರ್ಗ ಜಿಲ್ಲೆಗೆ ಭದ್ರೆ ನೀರು ಹರಿಯುವತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲವೆಂದು ಎಚ್ಚರಿಸಿದರು.
ಹೊಸದುರ್ಗ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೋರೇಶ್, ಕಾರ್ಯದರ್ಶಿ ಶಶಿಧರ್, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಡಿ.ಎಸ್.ಹಳ್ಳಿ, ರೈತ ಮುಖಂಡರುಗಳಾದ ನಿರಂಜನ್, ಮೂಡಲಗಿರಿಯಪ್ಪ, ಈಶ್ವರಪ್ಪ, ಗಿರೀಶ್, ತಿಪ್ಪೇಸ್ವಾಮಿ, ಬಸವರಾಜ್, ಶಿವಣ್ಣ, ವಿಜಯ್, ನಾಗರಾಜ್‍ರೆಡ್ಡಿ, ವರದಪ್ಪ, ಚಿತ್ತಪ್ಪ ಇನ್ನು ಅನೇಕರು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.