ಕೋಲಾರ ಬೇಡ.. ಬಾದಾಮಿಯಲ್ಲಿಯೇ ಸ್ಪರ್ಧಿಸಿ ಎಂದ ಯಡಿಯೂರಪ್ಪ : ಸಲಹೆಗೆ ಸಿದ್ದರಾಮಯ್ಯ ಏನಂದ್ರು..?

1 Min Read

 

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಕೋಲಾರದಿಂದಾನೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಇದರ ನಡುವೆ ಮಾಜಿ ಸಿಎಂ ಯಡಿಯೂರಪ್ಪ ಅವರು ಸಲಹೆಯನ್ನು ನೀಡಿದ್ದಾರೆ.

ಈ ಬಗ್ಗೆ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ @BSYBJP ಅವರು ನನ್ನ ಮೇಲಿನ ಪ್ರೀತಿಯಿಂದ ಮುಂದಿನ ಚುನಾವಣೆಯಲ್ಲಿ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಸಲಹೆ ನೀಡಿದ್ದಾರೆ. ಅವರ ಸಲಹೆಗೆ ಧನ್ಯವಾದ. ನನ್ನ ಹಿತೈಷಿಯಂತಿರುವ ಯಡಿಯೂರಪ್ಪನವರಿಗೆ ದೇವರು ದೀರ್ಘ ಆಯಸ್ಸು, ಆರೋಗ್ಯ ಕರುಣಿಸಲಿ.

ಕಳೆದ 5 ವರ್ಷಗಳಿಂದ ಬಾದಾಮಿಯ ಶಾಸಕನಾಗಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು, ಕ್ಷೇತ್ರದ ಜನರ ಕಷ್ಟ ಸುಖಕ್ಕೆ ನೀಡಿದ ಸ್ಪಂದನೆಯೇ ಅಲ್ಲಿ ನನ್ನನ್ನು ಗರಿಷ್ಠ ಮತಗಳ ಅಂತರದಿಂದ ಗೆಲ್ಲಿಸಲಿದೆ ಎಂಬ ಪೂರ್ಣ ಭರವಸೆ ನನಗಿದೆ.
ಸೋಲುವ ಭಯದಿಂದ ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂಬುದು ಕೆಲವರ ಭ್ರಮೆ ಅಷ್ಟೆ.

ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸಿ ಶಾಸಕನಾದರೆ ವಾರಕ್ಕೊಮ್ಮೆಯಾದರೂ ಕ್ಷೇತ್ರಕ್ಕೆ ಭೇಟಿಕೊಟ್ಟು, ಜನರ ಕಷ್ಟದಲ್ಲಿ ಭಾಗಿಯಾಗಬೇಕು, ಅಭಿವೃದ್ಧಿ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳಬೇಕು. ಆದರೆ ವಯಸ್ಸು 75 ದಾಟಿದೆ, ದೂರದ ಪ್ರಯಾಣ ಕಷ್ಟವೆನಿಸಿ ಬೆಂಗಳೂರಿಗೆ ಸಮೀಪದ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ.

ಕಳೆದ 5 ವರ್ಷದಿಂದ ಬಾದಾಮಿ ಕ್ಷೇತ್ರ ಹಿಂದೆಂದೂ ಕಾಣದ ಅಭಿವೃದ್ಧಿ ಕಾರ್ಯಗಳನ್ನು ಕಂಡಿದೆ. ನನಗೆ ಮತ ನೀಡಿ ಗೆಲ್ಲಿಸಿದ ಬಾದಾಮಿ ಜನರ ನಂಬಿಕೆಗೆ ಈ 5 ವರ್ಷಗಳಲ್ಲಿ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂಬ ಸಂತೃಪ್ತಿ ನನಗಿದೆ.
ಬಾದಾಮಿಯ ಜನರ ಪ್ರೀತಿಗೆ ನಾನು ಸದಾ ಋಣಿ.

ರಾಜ್ಯಾದ್ಯಂತ ಪ್ರವಾಸ ಮಾಡಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿರುವ ಯಡಿಯೂರಪ್ಪನವರು ಮತ್ತೊಮ್ಮೆ ಶಾಸಕರಾಗಿ ಜನಸೇವೆ ಮಾಡಲು ದೈಹಿಕವಾಗಿ ಶಕ್ತರಿದ್ದಾರೆ, ಹೀಗಿದ್ದಾಗ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದರೆ ದಶಕಗಳಿಂದ ಗೆಲ್ಲಿಸುತ್ತಾ ಬಂದಿರುವ ಶಿಕಾರಿಪುರದ ಜನರಿಗೆ ದ್ರೋಹ ಬಗೆದಂತಾಗುವುದಿಲ್ಲವೇ?

ಯಡಿಯೂರಪ್ಪನವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದಲೇ ಸ್ಪರ್ಧಿಸುವ ನಿರ್ಧಾರ ಕೈಗೊಂಡರೆ ಅದನ್ನು ಸಂತೋಷದಿಂದ ಸ್ವಾಗತಿಸುತ್ತೇನೆ.
ನನ್ನ ಸಲಹೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆಂದು ಭಾವಿಸಿದ್ದೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *